ಪುತ್ತೂರು: ರಂಗೇರಿದ ಚುನಾವಣಾ ಕಣ-ಕಾಂಗ್ರೆಸ್-ಬಿಜೆಪಿಗೆ ಬಣ ರಾಜಕಾರಣದ ಟೆನ್ಶನ್
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲ ಪ್ರತಿಸ್ಪರ್ಧಿಗಳಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿಕೊಂಡಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಎರಡೂ ಪಕ್ಷದೊಳಗೆ ಬಣ ರಾಜಕಾರಣ ಭರದಿಂದ ಸಾಗುತ್ತಿದೆ. ಸ್ವಪಕ್ಷವನ್ನೇ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಗಳು ಎರಡೂ ಪಕ್ಷದಲ್ಲಿ ಗೋಚರಿಸುತ್ತಿದೆ. ತನ್ನ ಪಕ್ಷದವರನ್ನು ಸೋಲಿಸಲು ಪ್ರಯತ್ನಿಸುವುದು ರಾಜ್ಯ ರಾಜಕಾರಣದಲ್ಲಿ ಇದು ಮೊದಲೇನೂ ಇಲ್ಲ. ಇಂತಹ ಅನೇಕ ಘಟನೆಗಳು ಈ ಹಿಂದೆಯೂ ನಡೆದ ಉದಾಹರಣೆ ಇದೆ.

ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹಾಗೂ ಬಿಜೆಪಿಯಿಂದ ಆಶಾ ತಿಮ್ಮಪ್ಪ ಗೌಡ ಟಿಕೆಟ್ ಪಡೆದುಕೊಂಡಿದ್ದಾರೆ. ಅಶೋಕ್ ಕುಮಾರ್ ರೈ ಅವರಿಗೆ ಟಿಕೆಟ್ ಕನ್ಫರ್ಮ್ ಆಗಿದ್ದರೂ ಅದನ್ನು ತಡೆಹಿಡಿಯುವಂತೆ ಶಕುಂತಳಾ ಶೆಟ್ಟಿ ನೇತೃತ್ವದ ನಿಯೋಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಕೊನೆಯ ಕ್ಷಣದಲ್ಲಿ ಮನವಿ ಮಾಡಿತ್ತು.
ಅಲ್ಲದೇ ಕಾಂಗ್ರೆಸ್ ನಲ್ಲಿ ಮಾಜಿ ಶಾಸಕಿ ಶಂಕುತಳಾ ಶೆಟ್ಟಿಯವರಿಗೆ ಟಿಕೇಟ್ ನೀಡದಿದ್ದರೆ ಮಹಿಳಾ ಕಾಂಗ್ರೆಸ್ ಸದ್ಯಸರು ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದರು. ಕಾಂಗ್ರೆಸ್ ನ ಕೆಲ ಹುದ್ದೆಗಳಿಗೆ ತಾವೂ ರಾಜೀನಾಮೆ ನೀಡುತ್ತೇವೆ ಎಂದು ಪಕ್ಷದ ಕೆಲ ನಾಯಕರು ಹೇಳಿಕೊಂಡಿದ್ದರು. ಇದೀಗ ಶಕುಂತಳಾ ಶೆಟ್ಟಿಯವರಿಗೆ ಈ ಬಾರಿ ಟಿಕೆಟ್ ಕೈ ತಪ್ಪಿದ್ದು ಅವರ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದವರ ಮುಂದಿನ ನಡೆ ಏನು ಎಂಬುವುದು ಕುತೂಹಲ ಮೂಡಿಸಿದೆ.
ಇನ್ನು ಬಿಜೆಪಿಯಲ್ಲಿ ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಪಕ್ಷದೊಳಗೆ ಅಸಮಾಧಾನ ಇದೆ. ಒಕ್ಕಲಿಗ ಕೋಟಾದಡಿಯಲ್ಲಿ ಆಶಾ ತಿಮ್ಮಪ್ಪ ಗೌಡ ಟಿಕೆಟ್ ಗಿಟ್ಟಿಸಿದ್ದಾರೆ ಎನ್ನಲಾಗುತ್ತಿದ್ದು ಜಾತಿ ರಾಜಕಾರಣವನ್ನು ಬಿಜೆಪಿ ಮಾಡಿದೆ ಎಂದು ಸ್ವಪಕ್ಷೀಯರೇ ದೂರಿಕೊಂಡು ಬೇಸರ ವ್ಯಕ್ತಪಡಿಸುತ್ತಿರುವುದಾಗಿಯೂ ತಿಳಿದು ಬಂದಿದೆ. ಈ ಬಾರಿ ಹಾಲಿ ಶಾಸಕ ಸಂಜೀವ ಮಠಂದೂರು ಅವರಿಗೆ ಟಿಕೇಟ್ ಕೈತಪ್ಪಿರುವ ಬಗ್ಗೆ ಅವರ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಹಾಲಿ ಶಾಸಕರನ್ನೇ ಮತ್ತೆ ಕಣ್ಣಕ್ಕಿಳಿಸಬೇಕಿತ್ತು ಎನ್ನುವ ಚರ್ಚೆ ಕೂಡಾ ಜೋರಾಗಿ ನಡೆಯುತ್ತಿದೆ.
ಅತ್ತ ಬಿಜೆಪಿಯ ಟಿಕೆಟ್ ಅಕಾಂಕ್ಷಿಯಾಗಿದ್ದ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಯಿಂದ ದೂರ ಸರಿದು ತೊಡೆ ತಟ್ಟಿದ್ದಾರೆ. ಪುತ್ತಿಲ ಬೆಂಬಲಿಗರು ಸಭೆ ನಡೆಸಿ ಪಕ್ಷೇತರವಾಗಿ ಕಾಣಕ್ಕಿಳಿಯುವಂತೆ ಪಟ್ಟು ಹಿಡಿದಿದ್ದರು. ಅದರಂತೆ ತಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಅರುಣ್ ಕುಮಾರ್ ಪುತ್ತಿಲ ಪತ್ರಿಕಾಗೋಷ್ಠಿ ನಡೆಸಿ ಘೋಷಿಸಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆಯಿಂದ ಬಿಜೆಪಿಗೆ ನಷ್ಟ ಆಗುವ ಬಗ್ಗೆ ಲೆಕ್ಕಾಚಾರಗಳು ನಡೆಯುತ್ತಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಪುತ್ತಿಲರನ್ನು ಗೆಲ್ಲಿಸಿ ತೋರಿಸುತ್ತೇವೆ ಎಂದು ಅವರ ಅಭಿಮಾನಿಗಳು ಚಾಲೆಂಜ್ ಮಾಡುತ್ತಿದ್ದಾರೆ. ಅಲ್ಲದೇ ಅರುಣ್ ಕುಮಾರ್ ಪುತ್ತಿಲರ ರಾಜಕೀಯ ಭವಿಷ್ಯ ಉಳಿಯಬೇಕಾದರೆ ಅವರಿಗೆ ಈ ಸ್ಪರ್ಧೆ ಅನಿವಾರ್ಯ ಎಂದೂ ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್ ನಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ದಿವ್ಯಪ್ರಭಾ ಗೌಡ ಚಿಲ್ತಡ್ಕ ಅವರು ಜೆಡಿಎಸ್ ಸೇರ್ಪಡೆಗೊಂಡಿದ್ದು ಅವರಿಗೆ ಜೆಡಿಎಸ್’ನಿಂದ ಪುತ್ತೂರು ಕ್ಷೇತ್ರದ ಟಿಕೆಟ್ ಕೂಡಾ ಸಿಕ್ಕಿದೆ. ಹಾಗಾಗಿ ಅವರು ಜೆಡಿಎಸ್’ನಿಂದ ಕಣಕ್ಕಿಳಿಯುವು ನಿಶ್ಚಿತ. ಇನ್ನು ಆಮ್ ಆದ್ಮಿ ಅಭ್ಯರ್ಥಿಯಾಗಿ ಡಾ.ವಿಶು ಕುಮಾರ್ ಗೌಡ ಸ್ಪರ್ಧಿಸಲಿದ್ದು ಎಸ್.ಡಿ.ಪಿ.ಐ ಅಭ್ಯರ್ಥಿಯಾಗಿ ಶಾಫಿ ಬೆಳ್ಳಾರೆ ಜೈಲಿನಿಂದಲೇ ಸ್ಪರ್ಧಿಸಲಿದ್ದಾರೆ.
ಇನ್ನು ಕಾಂಗ್ರೆಸ್ ನಲ್ಲೂ ಬಂಡಾಯದ ಮಾತುಗಳು ಕೇಳಿ ಬರುತ್ತಿದೆ. ದಿವ್ಯಪ್ರಭಾ ಗೌಡ ಅವರು ಜೆಡಿಎಸ್’ನಿಂದ ಸ್ಪರ್ಧಿಸಿ ಕಾಂಗ್ರೆಸ್ ಗೆ ಬೀಳುವ ಜಾತ್ಯಾತೀತ ಮತಗಳನ್ನು ಒಡೆಯುವ ಭೀತಿ ಕಾಂಗ್ರೆಸ್ ಗೆ ಎದುರಾಗಿದ್ದು ಅವರ ಸ್ಪರ್ಧೆ ಕಾಂಗ್ರೆಸ್ ಗೆ ಡ್ಯಾಮೇಜ್ ಮಾಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆಮ್ ಆದ್ಮಿ ಅಭ್ಯರ್ಥಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಈ ಎರಡೂ ಪಕ್ಷಗಳ ಓಟು ಬೀಳುವ ಸಾಧ್ಯತೆಯಿದೆ ಎನ್ನುವ ಲೆಕ್ಕಾಚಾರ ಹಾಕಲಾಗುತ್ತಿದೆ. ಎಸ್.ಡಿ.ಪಿ.ಐ ಸ್ಪರ್ಧೆಯಿಂದ ಕಾಂಗ್ರೆಸ್ ಗೆ ನಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೈಜ ಹಣಾಹಣಿ ನಡೆಯಲಿದ್ದು ಬಿಜೆಪಿ ಮತ್ತೊಮ್ಮೆ ಕ್ಷೇತ್ರವನ್ನು ವಶಪಡಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ. ಬಿಜೆಪಿಗೆ ಈ ಬಾರಿ ಪ್ರಬಲ ಪ್ರತಿಸ್ಪರ್ಧಿ ಅಶೋಕ್ ಕುಮಾರ್ ರೈ ವಿರುದ್ಧ ಗೆಲ್ಲುವುದು ಅಷ್ಟು ಸುಲಭ ಅಲ್ಲ ಎನ್ನಲಾಗುತ್ತಿದೆ. ಅಶೋಕ್ ಕುಮಾರ್ ರೈ ಅವರು ಸಮಾಜ ಸೇವಕರಾಗಿರುವ ಕಾರಣ ಅವರಿಗೇ ತನ್ನದೇ ಆದ ಪರ್ಸನಲ್ ಓಟು ಇದೆ ಎನ್ನುವ ಲೆಕ್ಕಾಚಾರ ಹಾಕಲಾಗುತ್ತಿದೆ. ಅತ್ತ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರ ಗೆಲುವಿಗೆ ಸಂಘ ಪರಿವಾರ ಅಖಾಡಕ್ಕೆ ಇಳಿದು ಪ್ಲಾನ್ ರೂಪಿಸುತ್ತಿರುವುದಾಗಿ ತಿಳಿದು ಬಂದಿದೆ.
ಒಟ್ಟಿನಲ್ಲಿ ಪುತ್ತೂರು ಕ್ಷೇತ್ರದ ರಾಜಕೀಯ ಚುನಾವಣಾ ಕದನ ಈ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ರಂಗು ಪಡೆದುಕೊಂಡಿದೆ. ಕ್ಷೇತ್ರದ ಜನರು ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುವುದು ಮೇ.13ರಂದು ಗೊತ್ತಾಗಲಿದೆ. ಅಲ್ಲಿಯವರೆಗೆ ಕಾಯಬೇಕಷ್ಟೆ.