ರಾಜ್ಯದಲ್ಲಿ ಸೋಲಿನ ಭೀತಿಯಿಂದ ಐಟಿ, ಇ.ಡಿ, ಸಿಬಿಐನ್ನು ಛೂ ಬಿಡಲು ಬಿಜೆಪಿ ಸರಕಾರದಿಂದ ಷಡ್ಯಂತ್ರ-
ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ
ಐಟಿ, ಇಡಿ ಹಾಗೂ ಸಿಬಿಐ ಮುಂತಾದ ಸ್ವಾಯತ್ತ ಸಂಸ್ಥೆಗಳನ್ನು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ರಾಜ್ಯದ ಕಾಂಗ್ರೆಸ್ ನಾಯಕರನ್ನು ಬೆದರಿಸಲು ಬಿಜೆಪಿ ಸರ್ಕಾರ ಷಡ್ಯಂತ್ರ ನಡೆಸಿದೆ ಎಂದು ಆರೋಪಿಸಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ದೆಹಲಿಯಲ್ಲಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಬಿಜೆಪಿಗೆ ಕರ್ನಾಟಕದಲ್ಲಿ ಸೋಲಿನ ಭೀತಿ ಆರಂಭವಾಗಿದೆ. ಎಲ್ಲಾ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳುತ್ತಿವೆ.
ಬಿಜೆಪಿ ಹೈಕಮಾಂಡ್ ಗೆ ಕೂಡ ಕರ್ನಾಟಕದ ಬಿಜೆಪಿ ಮುಳುಗುತ್ತಿದೆ, ಮುಂದೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಗೊತ್ತಿದೆ ಎಂದು ಅವರು ಹೇಳಿದ್ದಾರೆ.
ನಮಗೆ ನಂಬಿಕರ್ಹ ಮೂಲದಿಂದ ಮಾಹಿತಿ ಸಿಕ್ಕಿದ್ದು, ಬಿಜೆಪಿಯವರು ಐ.ಟಿ, ಇ.ಡಿ ಹಾಗೂ ಸಿಬಿಐ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲಿದ್ದಾರೆ. ಈಗಾಗಲೇ ಅವರು ಸಾವಿರಕ್ಕೂ ಅಧಿಕ ಆದಾಯ ತೆರಿಗೆ ಹಾಗೂ ಇ.ಡಿ ಅಧಿಕಾರಿಗಳನ್ನು ಕಳುಹಿಸಿದ್ದು, ಅವರ ಮೂಲಕ ಕಾಂಗ್ರೆಸ್ ನ ಅಭ್ಯರ್ಥಿಗಳು, ಕಾಂಗ್ರೆಸ್ ಪರವಾಗಿ ಕೆಲಸ ಮಾಡುವವರು ಹಾಗೂ ಕಾಂಗ್ರೆಸ್ ಬಗೆಗೆ ಸಹಾನುಭೂತಿ ಹೊಂದಿರುವ ಜನರ ಮೇಲೆ ದಾಳಿ ಮಾಡಲು ಯೋಜಿಸಲಾಗಿದೆ. ಈ ಅಧಿಕಾರಿಗಳು ನಮ್ಮ ಪಕ್ಷದವರನ್ನು ಬೆದರಿಸುತ್ತಿದ್ದಾರೆ. ಇದು ಸ್ಪಷ್ಟ ಅಧಿಕಾರದ ದುರುಪಯೋಗವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿರುವ ಬಿಜೆಪಿ ಸರ್ಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ನಾವು ಬಿಜೆಪಿಯ ನೀಚ ರಾಜಕೀಯದ ವಿರುದ್ಧ ಹೋರಾಟ ಮಾಡುತ್ತೇವೆ, ಸೋಲುವುದಿಲ್ಲ ಎಂದು ಅವರು ಹೇಳಿದ್ದಾರೆ.