ನೆಲ್ಯಾಡಿ: ನಿಗೂಢವಾಗಿ ನಾಪತ್ತೆಯಾಗಿದ್ದ ವೃದ್ದೆ ಕಾಡಿನಲ್ಲಿ ಪತ್ತೆ: ಎಲೆಗಳನ್ನು ತಿಂದು ಮೂರು ದಿನ ಕಾಡಿನಲ್ಲೇ ಕಳೆದಿದ್ದ ಐಸಮ್ಮ
ನೆಲ್ಯಾಡಿ: ಫೆ.28ರಂದು ಸಂಜೆ ವೇಳೆ ನಾಪತ್ತೆಯಾಗಿದ್ದ ಕೌಕ್ರಾಡಿ ಗ್ರಾಮದ ಹೊಸಮಜಲು ಸಮೀಪದ ದೋಂತಿಲ ನಿವಾಸಿ ಐಸಮ್ಮ (80ವ.) ರವರು ಮಾ.3ರಂದು ಬೆಳಿಗ್ಗೆ ಮನೆಯಿಂದ ಸುಮಾರು 4 ಕಿ.ಮೀ.ದೂರದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ.

ಅರಣ್ಯದಲ್ಲೇ ಮೂರು ರಾತ್ರಿ ಹಾಗೂ ಎರಡು ಹಗಲು ಕಳೆದಿರುವ ಐಸಮರವರು ಎಲೆಗಳನ್ನು ತಿಂದು ಬದುಕಿದ್ದು ಪವಾಡ ಸದೃಶವಾಗಿ ಜೀವಂತವಾಗಿ ಮನೆ ಸೇರಿದ್ದಾರೆ.
ತುಸು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಐಸಮ್ಮ ಅವರು ನಾಪತ್ತೆಯಾದ ಬಳಿಕ ಅವರ ಮಕ್ಕಳು, ಸಂಬಂಧಿಕರು ಹಾಗೂ ಊರವರು ತೀವ್ರ ಹುಡುಕಾಟ ನಡೆಸಿದ್ದರು.
ಕಾಡು ಸೇರಿದ ಐಸಮ್ಮ ಅವರಿಗೆ ಮರಳಿ ಬರಲು ದಾರಿ ಕಾಣದೆ ಅಲ್ಲೆ ಬಾಕಿಯಾಗಿದ್ದರು. ಕೊನೆಗೂ ಮಾಹಿತಿ ಪಡೆದ ಅವರ ಕುಟುಂಬಸ್ಥರು ಕಾಡಿನಿಂದ ಮನೆಗೆ ಕರೆ ತಂದಿದ್ದಾರೆ.
ಮೂರು ದಿನ ಕಾಡಿನಲ್ಲೇ ಕಳೆದು ಇದೀಗ ಮನೆ ಸೇರಿರುವ ಐಸಮ್ಮರವರ ವಿಚಾರ ಗ್ರಾಮದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಆಯಸ್ಸು ಗಟ್ಟಿ ಇದ್ದರೆ ಏನೇ ಆದರೂ ಬದುಕಬಹುದು ಎಂಬುವುದಕ್ಕೆ ಐಸಮ್ಮ ಉದಾಹರಣೆಯಾಗಿದ್ದಾರೆ.