ತಂದೆಯನ್ನು ಕೊಲೆಗೈದು ಮೃತದೇಹವನ್ನು 30ಕ್ಕೂ ಅಧಿಕ ತುಂಡುಗಳನ್ನು ಮಾಡಿ ಕೊಳವೆಬಾವಿಗೆ ಎಸೆದ ಪುತ್ರ..!
ತಂದೆಯನ್ನು ಕೊಲೆಗೈದು ಮೃತದೇಹವನ್ನು 30ಕ್ಕೂ ಅಧಿಕ ತುಂಡುಗಳನ್ನು ಮಾಡಿ ಕೊಳವೆಬಾವಿಗೆ ಎಸೆದ ಭೀಕರ ಘಟನೆ ಘಟನೆ ಬಾಗಲಕೋಟೆಯ ಮುಧೋಳ ಹೊರವಲಯದ ಮಂಟೂರ್ ಬಳಿ ನಡೆದಿದೆ.
ಪರಶುರಾಮ ಕುಳಲಿ(54) ಕೊಲೆಯಾದವರು. ಅವರ ಪುತ್ರ 20 ವರ್ಷ ಪ್ರಾಯದ ವಿಠ್ಠಲ ಕುಳಲಿ ಕೊಲೆ ಆರೋಪಿಯಾಗಿದ್ದು, ಆತನನ್ನು ಮುಧೋಳ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಕುಡಿತದ ಚಟ ಹೊಂದಿದ್ದ ಪರಶುರಾಮ ನಿತ್ಯ ಮಗನಿಗೆ ಬೈಯುವುದು, ಹಲ್ಲೆ ನಡೆಸುತ್ತಿದ್ದರು ಎನ್ನಲಾಗಿದ್ದು ಇದಕ್ಕಾಗಿ ವಿಠ್ಠಲ ಡಿ.6ರಂದು ರಾಡ್ ನಿಂದ ಥಳಿಸಿ ತನ್ನ ತಂದೆಯನ್ನು ಕೊಲೆ ಮಾಡಿದ್ದಾನೆ. ಬಳಿಕ ತಮ್ಮದೇ ಹೊಲದಲ್ಲಿರುವ ಕೊಳವೆಬಾವಿ ಬಳಿ ಮೃತದೇಹವನ್ನು ಸಾಗಿಸಿ ದೇಹವನ್ನು ಕೊಳವೆಬಾವಿಗೆ ಇಳಿಸಲು ಸಾಧ್ಯವಾಗದೇ ಇದ್ದಾಗ ಕೊಡಲಿಯಿಂದ ತುಂಡು ತುಂಡು ಮಾಡಿ ಕೊಳವೆಬಾವಿಗೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ.
ಕೊಲೆ ಕೃತ್ಯ ಬಯಲಾದ ಹಿನ್ನೆಲೆಯಲ್ಲಿ ಪೊಲೀಸರು ಕೊಳವೆಬಾವಿಯನ್ನು ಅಗೆದು ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತದೇಹವನ್ನು 30ರಷ್ಟು ತುಂಡಗಳನ್ನಾಗಿ ಕತ್ತರಿಸಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.