ಪುತ್ತೂರು: ಬಾವಿಗೆ ಬಿದ್ದ ವೃದ್ಧೆಯನ್ನು ರಕ್ಷಿಸಿದ ಅಗ್ನಿ ಶಾಮಕ ದಳ
ಪುತ್ತೂರು: ಆಕಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧೆಯೊಬ್ಬರನ್ನು ಪುತ್ತೂರು ಅಗ್ನಿಶಾಮಕದಳದವರು ರಕ್ಷಣೆ ಮಾಡಿದ ಘಟನೆ ಡಿ.13 ರಂದು ಬಲ್ನಾಡಿನಲ್ಲಿ ನಡೆದಿದೆ.
ಬಲ್ನಾಡು ನಿವಾಸಿ 76 ವರ್ಷದ ಬಾಲಕ್ಕ ಬಾವಿಗೆ ಬಿದ್ದ ವೃದ್ದೆ. ಅವರು ಮಧ್ಯಾಹ್ನ ಊಟ ಮಾಡಿದ ಬಳಿಕ ನಾಪತ್ತೆಯಾಗಿದ್ದು, ಮನೆ ಮಂದಿ ಹುಡುಕಾಡಿದಾಗ ಬಾವಿಯ ಹಗ್ಗ ಕೆಳಗೆ ಬಿದ್ದಿರುವುದನ್ನು ಗಮನಿಸಿ ಬಾವಿಯನ್ನು ನೋಡಿದಾಗ ಬಾವಿಯೊಳಗೆ ಅವರು ಬಿದ್ದಿರುವುದು ಬೆಳಕಿಗೆ ಬಂದಿತ್ತು. ತಕ್ಷಣ ಅಗ್ನಿಶಾಮಕದಳದವರಿಗೆ ಮನೆ ಮಂದಿ ಕರೆ ಮಾಡಿದ್ದರು.
ಅಗ್ನಿಶಾಮಕದಳದಳದವರು ಸುಮಾರು 30 ಅಡಿ ಆಳದ ಬಾವಿಯಿಂದ ಬಾಲಕ್ಕ ಅವರನ್ನು ಮೇಲೆತ್ತುವ ಮೂಲಕ ರಕ್ಷಣೆ ಮಾಡಿದ್ದಾರೆ. ಬಳಿಕ ಬಾಲಕ್ಕ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.