ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಬಾರಿಯ ವಿಧಾನಸಭಾ ಚುನಾವಣೆಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಗೊತ್ತಾ?
ಕೋಲಾರ: 2023ರ ವಿಧಾನಸಭಾ ಚುನಾವಣೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಕುತೂಹಲಕ್ಕೆ ಬಹುತೇಕ ತೆರೆ ಬಿದ್ದಿದೆ. ಸಿದ್ದರಾಮಯ್ಯ ಬಾದಾಮಿ ಬಿಟ್ಟು ಬೇರೆ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದ್ದು, ಈ ಬಾರಿ ಕೋಲಾರದಿಂದ ಸ್ಪರ್ಧೆಗೆ ಬಯಸಿದ್ದಾರೆ.
ವಿಧಾನಸಭಾ ಚುನಾವಣೆಗೆ ಕ್ಷೇತ್ರ ಆಯ್ಕೆಯಲ್ಲಿ ಗೊಂದಲದಲ್ಲಿದ್ದ ಸಿದ್ದರಾಮಯ್ಯ ಇಂದು ವಿಶೇಷ ಬಸ್ ನಲ್ಲಿ ಕೋಲಾರಕ್ಕೆ ತೆರಳಿದ್ದು, ಕೋಲಾರಮ್ಮ ದೇವರ ದರ್ಶನ ಪಡೆದು ಬಳಿಕ ಸ್ಥಳೀಯ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು. ಕೋಲಾರದಿಂದ ಸ್ಪರ್ಧಿಸುವಂತೆ ನಾಯಕರು, ಬೆಂಬಲಿಗರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸಲು ಮತ್ತೆ ಕೋಲಾರಕ್ಕೆ ಬರುತ್ತೇನೆ ಎಂದು ಹೇಳುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸುವ ಬಗ್ಗೆ ಸುಳುವು ನೀಡಿದ್ದಾರೆ.
ವರುಣಾ, ಬಾದಾಮಿ, ಚಾಮರಾಜಪೇಟೆ ಸೇರಿದಂತೆ ಹಲವು ಕ್ಷೇತ್ರಗಳಿಂದ ಸ್ಪರ್ಧಿಸಲು ಒತ್ತಡ ಬರುತ್ತಿದೆ. ಈ ಬಾರಿ ಕೋಲಾರದಿಂದ ಶ್ರೀನಿವಾಸ್ ಗೌಡ ಸ್ಪರ್ಧಿಸುವುದಿಲ್ಲ. ಹಾಗಾಗಿ ಕೋಲಾರದಿಂದ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಕೋಲಾರಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತೇನೆ. ನಾಯಕರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇನೆ ಎಂದು ಹೇಳಿದರು.
ಈ ಮೂಲಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ದರಾಮಯ್ಯ ಸೇಫ್ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.