ಪುತ್ತೂರು ಮೂಲದ ವೈದ್ಯರೊಬ್ಬರ ಮೃತದೇಹ ಅನುಮಾನಾಸ್ಪದವಾಗಿ ರೈಲ್ವೇ ಹಳಿಯ ಮೇಲೆ ಪತ್ತೆಯಾದ ಪ್ರಕರಣ: ಉನ್ನತ ಮಟ್ಟದ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ಮನವಿ
ಕೆಲವು ದಿನಗಳ ಹಿಂದೆ ಕುಂದಾಪುರ ಬಳಿ ರೈಲ್ವೇ ಹಳಿಯ ಮೇಲೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪುತ್ತೂರು ಮೂಲದ ವೈದ್ಯರೊಬ್ಬರ ಸಾವಿನ ಕುರಿತು ಕೇಸು ದಾಖಲಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಇಂದು ಮಂಗಳೂರು ನಗರದಲ್ಲಿ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾ. ಭರತ್ ಶೆಟ್ಟಿ ಅವರು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ಇದೇ ಸಂಬಂಧ ವಿಶ್ವ ಹಿಂದೂ ಪರಿಷತ್ ಸದಸ್ಯರು ಕೂಡ ಸಚಿವರಿಗೆ ಮನವಿ ಸಲ್ಲಿಸಿ, ಸಂಶಯಾಸ್ಪವಾಗಿ ಮೃತಪಟ್ಟ ವೈದ್ಯ ಕೃಷ್ಣಮೂರ್ತಿ ಅವರ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.