ಮಂಗಳೂರು: ಪ್ರೀತಿಯ ವಿಚಾರವಾಗಿ ಯುವಕನ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಶಿಕ್ಷೆ ಪ್ರಕಟ
ಮಂಗಳೂರು: ತಂಗಿಯನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಯುವಕನನ್ನು ತಲವಾರಿನಿಂದ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿರುವ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಪ್ರಮುಖ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

2019ರ ಜನವರಿ 3ರಂದು ಮಂಗಳೂರಿನ ಪಂಜಿಮೊಗರು ಮಾಲಾಡಿ ರಸ್ತೆಯ ಎಂ.ವಿ. ಶೆಟ್ಟಿ ಕಾಲೇಜು ಬಳಿ ಈ ಘಟನೆ ನಡೆದಿತ್ತು. ಪ್ರಕರಣದ ಮೊದಲನೇ ಆರೋಪಿ ಸುನಿಲ್ ಕುಮಾರ್ ಅಲಿಯಾಸ್ ಕೌಟಿ ಎಂಬಾತನ ತಂಗಿಯನ್ನು ರಾಕೇಶ್ ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಸುನಿಲ್ ಕುಮಾರ್, ಪ್ರವೀಣ್ ಪೂಜಾರಿ ಅಲಿಯಾಸ್ ಚೋಟು, ಪ್ರೀತಮ್ ಅಲಿಯಾಸ್ ಅಭಿ ಹಾಗೂ ರೋಹಿತ್ ಕುಮಾರ್ ಅಲಿಯಾಸ್ ಶೂಟರ್ ಸೇರಿಕೊಂಡು ರಾಕೇಶ್‌ನನ್ನು ತಲವಾರಿನಿಂದ ಕಡಿದು ಕೊಲೆ ಮಾಡಿದ್ದರು.
ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಎಸ್‌ಸಿ 105/2019ರ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಾಲ್ವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಿದೆ.
ನ್ಯಾಯಾಲಯ ವಿಧಿಸಿದ ಶಿಕ್ಷೆಯ ವಿವರ:
* 1ರಿಂದ 3ನೇ ಆರೋಪಿಗಳಿಗೆ: ಭಾರತೀಯ ದಂಡ ಸಂಹಿತೆ ಕಲಂ 302, 120(ಬಿ) ಜೊತೆಗೆ 34ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ತಲಾ ₹15,000 ದಂಡ. ದಂಡ ಪಾವತಿಸದಿದ್ದಲ್ಲಿ ಒಂದು ವರ್ಷ ಹೆಚ್ಚುವರಿ ಕಾರಾಗೃಹ ಶಿಕ್ಷೆ.
* 1ರಿಂದ 4ನೇ ಆರೋಪಿಗಳಿಗೆ: ಕಲಂ 201 ಜೊತೆಗೆ 34ರ ಅಡಿಯಲ್ಲಿ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ತಲಾ ₹5,000 ದಂಡ. ದಂಡ ಪಾವತಿಸದಿದ್ದಲ್ಲಿ ಒಂದು ತಿಂಗಳ ಹೆಚ್ಚುವರಿ ಶಿಕ್ಷೆ.
* 4ನೇ ಆರೋಪಿಗೆ: ಕಲಂ 212 ಜೊತೆಗೆ 34ರ ಅಡಿಯಲ್ಲಿ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ₹5,000 ದಂಡ. ದಂಡ ಪಾವತಿಸದಿದ್ದಲ್ಲಿ ಒಂದು ತಿಂಗಳ ಹೆಚ್ಚುವರಿ ಶಿಕ್ಷೆ.
ಒಟ್ಟು ₹70,000 ದಂಡದ ಮೊತ್ತದಲ್ಲಿ ₹20,000ವನ್ನು ಸರ್ಕಾರಕ್ಕೆ ಹಾಗೂ ₹50,000ವನ್ನು ಮೃತ ರಾಕೇಶ್‌ನ ತಂದೆಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ರಾಜೇಶ್ ಮಾರುತಿ ಕಮಟೆ ಅವರು ತೀರ್ಪು ಪ್ರಕಟಿಸಿದರು. ಸರ್ಕಾರಿ ಅಭಿಯೋಜಕರಾಗಿ ಮೋತೀಲಾಲ್ ಚೌದರಿ ವಾದ ಮಂಡಿಸಿದ್ದರು. ಪ್ರಕರಣದ ತನಿಖಾಧಿಕಾರಿಯಾಗಿ ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕೆ.ಆರ್. ನಾಯ್ಕ್ ಕಾರ್ಯನಿರ್ವಹಿಸಿದ್ದರು.


