ಆಲಂಕಾರು: ಥಾರ್ ಜೀಪು ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಪ್ರಕರಣ: ಪರಾರಿಯಾಗಿದ್ದ ಚಾಲಕನ ಬಂಧನ
ಕಡಬ: ನಾಲ್ಕು ದಿನದ ಹಿಂದೆ ಜೀಪು ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಪರಾರಿಯಾಗಿದ್ದ ಜೀಪು ಚಾಲಕನನ್ನು ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಆಲಂಕಾರು ನಿವಾಸಿ ಇಲ್ಯಾಸ್ ಎನ್.ಎ.(33ವ.) ಬಂಧನಕ್ಕೊಳಗಾಗಿ ಬಿಡುಗಡೆಯಾಗಿರುವ ಆರೋಪಿ.
ಸೆ.25ರಂದು ರಾತ್ರಿ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಆಲಂಕಾರು ಪೇಟೆಯಲ್ಲಿ ಥಾರ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಆಲಂಕಾರು ಗ್ರಾಮದ ನಾಡ್ತಿಲ ನಿವಾಸಿ ಲೋಕೇಶ್ (42ವ.) ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅಪಘಾತದ ಪರಿಣಾಮ ಲೋಕೇಶ್ ಅವರು ಬೈಕ್ ಸಮೇತ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದರೂ ಜೀಪು ಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಯುವಕರ ಗುಂಪು ಆಲಂಕಾರು ಪೇಟೆಯಲ್ಲಿ ಜಮಾಯಿಸತೊಡಗಿ ಪರಾರಿಯಾಗಿದ್ದ ವಾಹನದ ಹುಡುಕಾಟ ಆರಂಭಿಸಿದರು.
ಜೀಪು ವಶಪಡಿಸಿಕೊಂಡಿದ್ದ ಪೊಲೀಸರು ಆರೋಪಿಯ ಪತ್ತೆಗಾಗಿ ಶೋಧ ಕೈಗೊಂಡಿದ್ದರು. ಇದೀಗ ಆರೋಪಿ ಜೀಪು ಚಾಲಕ ಇಲ್ಯಾಸ್ ಎನ್.ಎ. ಎಂಬಾತನನ್ನು ಬಂಧಿಸಿರುವ ಪೊಲೀಸರು ಆತ ಮಾದಕ ವಸ್ತು ಸೇವಿಸಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಆರೋಪಿ ಜೀಪು ಚಾಲಕ ಮಾದಕ ವಸ್ತು ಸೇವನೆ ದೃಢಪಟ್ಟಿರುವುದಿಲ್ಲ. ಆರೋಪಿಯನ್ನು ಸೂಕ್ತ ಜಾಮೀನಿನೊಂದಿಗೆ ಬಿಡುಗಡೆ ಮಾಡಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.



