ಮೌಂಟನ್ ವ್ಯೂ ಅಸ್ವಾಲಿಹಾ ಕಾಲೇಜು, ದಾರುಲ್ ಫಲಾಹ್ ಮದ್ರಸ ವಿದ್ಯಾರ್ಥಿಗಳ ವಾರ್ಷಿಕ ಕಲಾ ಪ್ರತಿಭಾ ಕಾರ್ಯಕ್ರಮ ಸಮಾರೋಪ
ಪುತ್ತೂರು: ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ಅಧೀನದ ಅಸ್ವಾಲಿಹಾ ವುಮೆನ್ಸ್ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ದಾರುಲ್ ಫಲಾಹ್ ಮದ್ರಸ ವಿದ್ಯಾರ್ಥಿಗಳಿಗಾಗಿ ಹದಿನೈದು ದಿನಗಳ ಕಾಲ ನಡೆದ ವಾರ್ಷಿಕ ಕಲಾ ಪ್ರತಿಭಾ ಕಾರ್ಯಕ್ರಮದ ಸಮಾರೋಪ ಸಮಾರಂಭ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯು. ಮುಹಮ್ಮದ್ ಹಾಜಿ ಪಡೀಲ್ ಅವರು, ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಒದಗಿಸುವ ಕಲಾ,ಪ್ರತಿಭಾ ಸ್ಪರ್ಧೆಗಳು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಭವಿಷ್ಯದ ಸಾಧನೆಗಳಿಗೆ ಪ್ರೇರಣೆಯಾಗುತ್ತವೆ ಎಂದರು. ಈ ನಿಟ್ಟಿನಲ್ಲಿ ಮೌಂಟನ್ ವ್ಯೂ ಶಿಕ್ಷಣ ಸಂಸ್ಥೆಗಳಲ್ಲಿ ಕಾಲಕಾಲಕ್ಕೆ ವಿವಿಧ ಪ್ರತಿಭಾ ಕಾರ್ಯಕ್ರಮಗಳು ಹಾಗೂ ತರಬೇತಿಗಳನ್ನು ಆಯೋಜಿಸಲಾಗುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ ಮತ್ತು ವಿವಿಧ ಪ್ರತಿಭಾ ಕ್ಷೇತ್ರಗಳಲ್ಲೂ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ ಹಾಜಿ ಮುಹಮ್ಮದ್ ಸಾಬ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಲೆಯು ವಿದ್ಯಾರ್ಥಿಗಳ ಸೃಜನಶೀಲ ಚಿಂತನೆಗೆ ಹೊಸ ದಿಕ್ಕನ್ನು ನೀಡುತ್ತದೆ ಎಂದರು. ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜಿನ ಸಂಚಾಲಕ ಹಾಜಿ ಅಬ್ದುಲ್ ರಹಿಮಾನ್ ಅಝಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಭೆಯನ್ನು ಯಶಸ್ಸಾಗಿ ಪರಿವರ್ತಿಸಲು ನಿರಂತರ ಪರಿಶ್ರಮ ಹಾಗೂ ಶಿಸ್ತು ಅಗತ್ಯ ಎಂದು ಹೇಳಿದರು. ಯುವ ಉದ್ಯಮಿ ರಿಯಾಝ್ ಇಂಜಿನಿಯರ್ ಪರ್ಲಡ್ಕ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಸದುಪಯೋಗಪಡಿಸಿಕೊಂಡು ಉನ್ನತ ಗುರಿಗಳನ್ನು ಸಾಧಿಸಬೇಕು. ಶಿಕ್ಷಣ, ಕಲೆ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಮೌಂಟನ್ ವ್ಯೂ ಶಿಕ್ಷಣ ಸಂಸ್ಥೆಗಳು ಉತ್ತಮ ಸಾಧನೆ ಮಾಡುತ್ತಿರುವುದು ಗಮನಾರ್ಹವಾಗಿದೆ ಎಂದರು.
ಉದ್ಯಮಿ ಸುಲೈಮಾನ್ ಹಾಜಿ ಬೈತಡ್ಕ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯ ಹಿಂದೆ ಶಿಕ್ಷಕರು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಪ್ರೋತ್ಸಾಹ ಅತ್ಯಂತ ಮಹತ್ವದ್ದಾಗಿದೆ ಎಂದರು.
ಕೆಮ್ಮಾಯಿ ಜುಮ್ಮಾ ಮಸೀದಿಯ ಅಧ್ಯಕ್ಷ ಬಶೀರ್ ಹಾಜಿ ದಾರಂದಕುಕ್ಕು ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ಪ್ರೋತ್ಸಾಹ ಹಾಗೂ ಅವಕಾಶಗಳನ್ನು ನೀಡಬೇಕು ಎಂದು ಹೇಳಿದರು.
ಉದ್ಯಮಿ ಯೂಸುಫ್ ಹಾಜಿ ಬಡಕೋಡಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಉದ್ಯಮಿ ಹುಸೈನ್ ಹಾಜಿ ಕೆ.ಬಿ.ಕೆ. ಕೋಡಿಂಬಾಡಿ ಅವರು ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಟ್ರೋಫಿ ನೀಡಿ ಅಭಿನಂದಿಸಿದರು.
ಸಮಾರಂಭದ ಅಂಗವಾಗಿ ಮೌಂಟನ್ ವ್ಯೂ ದಾರುಲ್ ಫಲಾಹ್ ಮದ್ರಸ ವಿದ್ಯಾರ್ಥಿಗಳಿಂದ ವಿವಿಧ ಸಾಹಿತ್ಯಿಕ ಹಾಗೂ ಕಲಾ ಸ್ಪರ್ಧೆಗಳು ನಡೆದವು. ಇದೇ ವೇಳೆ ಕಾಲೇಜಿನ ಸಭಾಂಗಣದಲ್ಲಿ ಉಪನ್ಯಾಸಕಿಯರ ನೇತೃತ್ವದಲ್ಲಿ ಹದಿನೈದು ದಿನಗಳ ಕಾಲ ನಡೆದ ‘ಗ್ಲೋ–26′ ವಾರ್ಷಿಕ ಕಲಾ ಪ್ರತಿಭಾ ಸ್ಪರ್ಧೆಯಲ್ಲಿ ಫೆಲೀಝ್ ತಂಡ ಪ್ರಥಮ ಸ್ಥಾನ ಹಾಗೂ ಟೆಲೆಂಟೋ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಪ್ರತಿಭಾ ಪ್ರದರ್ಶನದಲ್ಲಿ ಭಾಗವಹಿಸಿದ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಟ್ರೋಫಿ ಮತ್ತು ವಿವಿಧ ಬಹುಮಾನಗಳನ್ನು ವಿತರಿಸಲಾಯಿತು. ಸಂಸ್ಥೆಯ ಶಿಕ್ಷಕ–ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಸ್ತಾದ್ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿದರು. ಶಾಲಾ ಶಿಕ್ಷಕ ರವೂಫ್ ಹಾಗೂ ಮದ್ರಸ ಶಿಕ್ಷಕ ನಝೀರ್ ಅರ್ಶದಿ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿ, ಕೊನೆಗೆ ವಂದಿಸಿದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಅಶ್ರಫ್ ಮತ್ತು ಇರ್ಶಾದ್ ಹಾಗೂ ಕಾರ್ಯಾಲಯ ನಿರ್ವಾಹಕರಾದ ಯೂಸುಫ್ ಮತ್ತು ಹಮೀದ್ ಸಹಕರಿಸಿದರು.


