ಕಾರ್ಯಕರ್ತನ ಆರೋಗ್ಯ ವಿಚಾರಿಸಲು ತಡರಾತ್ರಿ ಭೇಟಿ ನೀಡಿದ ಶಾಸಕ ಅಶೋಕ್ ರೈ
ಪುತ್ತೂರು: ಕಾಲು ನೋವಿನಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಯುವ ಕಾಂಗ್ರೆಸ್ ಮುಖಂಡ, ಪಾಣಾಜೆ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತನ ಮನೆಗೆ ಶಾಸಕ ಅಶೋಕ್ ರೈ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದು , ಶಾಸಕರು ಕಾರ್ಯಕರ್ತನ ಮನೆಗೆ ತೆರಳಿದ ಸಮಯ ತಿಳಿದು ಪಕ್ಷದ ಕಾರ್ಯಕರ್ತ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಮಾ.19 ರ ಸಂಜೆ 4 ಗಂಟೆಯಿಂದ ಪಾಣಾಜೆ ಗ್ರಾಮದಲ್ಲಿ ವಿವಿಧ ಕಾಮಗಾರಿಯ ಶಿಲಾನ್ಯಾಸಕ್ಕೆ ಶಾಸಕರು ತೆರಳಿದ್ದರು. ರಾತ್ರಿ ಸುಮಾರು 11 ಗಂಟೆಯ ತನಕ ವಿವಿಧ ಕಾಮಗಾರಿಗಳ ಶಿಲಾನ್ಯಾಸ ನಡೆದಿದೆ. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕಾರ್ಯಕರ್ತ ಶ್ರೀಪ್ರಸಾದ್ ರವರು ಬಂದಿರಲಿಲ್ಲ. ವೈಯುಕ್ತಿಕ ಕಾರಣಕ್ಕೆ ಶ್ರೀಪ್ರಸಾದರು ಎಲ್ಲೋ ಹೋಗಿರಬಹುದು ಎಂದು ಭಾವಿಸಿದ್ದ ಶಾಸಕರು ಅವರ ಗೈರಿನ ಬಗ್ಗೆ ಯಾರಲ್ಲೂ ಕೇಳಿರಲಿಲ್ಲ. ಶಿಲಾನ್ಯಾಸ ಮುಗಿದ ಬಳಿಕ ಶಾಸಕರು ಶಿವಪ್ರಸಾದ್ ಯಾಕೆ ಕಾಣಲಿಲ್ಲ ಎಂದು ಸ್ಥಳೀಯರಲ್ಲಿ ವಿಚಾರಿಸಿದ್ದಾರೆ. ಅವರಿಗೆ ಕಾಲಿನ ಆಪರೇಷನ್ ಆಗಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಕೂಡಲೇ ಶಾಸಕರು ನೇರವಾಗಿ ಶ್ರೀಪ್ರಸಾದರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಿ ಎಂದು ಹಾರೈಸಿದರು.
ಕಾರ್ಯಕರ್ತನಿಗೆ ನೋವಾಗಿದೆ ಎಂದು ತಿಳಿದ ತಕ್ಷಣ ತಡ ರಾತ್ರಿ ಎಂದು ಲೆಕ್ಕಿಸದೆ ಅವರ ನೋವಿಗೆ ಸ್ಪಂದಿಸಿದ ಶಾಸಕ ಅಶೋಕ್ ರೈ ನಡೆದ ಕಾಂಗ್ರೆಸ್ ಕಾರ್ಯಕರ್ತ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಈ ಬಗ್ಗೆ ಶ್ರೀಪ್ರಸಾದ್ ಪಾಣಾಜೆಯವರಲ್ಲಿ ಕೇಳಿದಾಗ ” “ಸಮಯವೇ ಅಡ್ಡಿಯಾಗಲಿಲ್ಲ… ತಾಯಿ ಹೃದಯದ ಕಾಳಜಿ ಮಾತ್ರ ಜೊತೆಗಿತ್ತು… ರಾತ್ರಿ ಹೊತ್ತಲ್ಲಿಯೂ ಬಂದು ನನ್ನ ಆರೋಗ್ಯ ವಿಚಾರಿಸಿದ ನಿಮ್ಮ ಮಾನವೀಯತೆ ನನ್ನ ಮನಸ್ಸನ್ನು ತುಂಬಾ ಸ್ಪರ್ಶಿಸಿದೆ. ನನ್ನ ನೋವನ್ನು ತಮ್ಮದೇ ಎಂದುಕೊಂಡ ನಿಮ್ಮ ಈ ಕಳಕಳಿ, ನನಗೆ ಧೈರ್ಯ ಮತ್ತು ಆತ್ಮವಿಶ್ವಾಸ ನೀಡಿತು. ಇಂತಹ ಹೃದಯವಂತ ನಾಯಕತ್ವವನ್ನು ಪಡೆಯುವುದು ನಮ್ಮ ಭಾಗ್ಯ. ನಿಮ್ಮ ಈ ಅಪಾರ ಕಾಳಜಿಗೆ ಸದಾ ಕೃತಜ್ಞನಾಗಿರುತ್ತೇನೆ ಎಂದು ತಿಳಿಸಿದ್ದಾರೆ.





