ಮಿಸೆಸ್ ಇಂಡಿಯಾ -2025 ಕಿರೀಟ ಮುಡಿಗೇರಿಸಿದ ಡಾ. ರಶ್ಮಾ ಎಂ ಶೆಟ್ಟಿ
ಪುತ್ತೂರು: ಮುಂಡೂರಿನ ಡಾ. ರಶ್ಮಾ ಮೋಹಿತ್ ಶೆಟ್ಟಿ ಅವರು ಮಿಸೆಸ್ ಇಂಡಿಯಾ -2025 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಡಿ.18 ರಿಂದ ಡಿ.21ವರೆಗೆ ಜೈಪುರದ ಜೈಬಾಗ್ ಪ್ಯಾಲೇಸ್ನಲ್ಲಿ ದೀಪಾಳಿ ಫಡ್ನಿಸ್ (ನ್ಯಾಷನಲ್ ಡೈರೆಕ್ಟರ್, ಮಿಸೆಸ್ ಇಂಡಿಯಾ) ಅವರ ಆಯೋಜನೆಯಲ್ಲಿ ನಡೆದ ಅಂತಿಮ ಸ್ಪರ್ಧೆಯಲ್ಲಿ ಮಿಸೆಸ್ ಇಂಡಿಯಾ–ಸೀಸನ್ 15 ಕಿರೀಟವನ್ನು ಡಾ. ರಶ್ಮಾ ಮೋಹಿತ್ ಶೆಟ್ಟಿ ತನ್ನ ಮುಡಿಗೇರಿಸಿಕೊಂಡಿದ್ದಾರೆ.

ಮಿಸೆಸ್ ಇಂಡಿಯಾ ಭಾರತದಲ್ಲಿನ ಅತ್ಯಂತ ಪ್ರತಿಷ್ಠಿತ ಹಾಗೂ ದೀರ್ಘಕಾಲದಿಂದ ನಡೆದ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾಗಿದ್ದು ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ 40 ಅಂತಿಮ ಸ್ಪರ್ಧಿಗಳು ಭಾಗವಹಿಸಿದ್ದ ಈ ನಾಲ್ಕು ದಿನಗಳ ಸ್ಪರ್ಧೆಯಲ್ಲಿ ಪ್ರತಿಭಾ ಸುತ್ತು, ಪ್ರೇರಣಾದಾಯಕ ಜೀವನ ಕಥೆ, ವೈಯಕ್ತಿಕ ಸಂದರ್ಶನ, ರ್ಯಾಂಪ್ ವಾಕ್, ರಾಷ್ಟ್ರೀಯ ವೇಷಭೂಷಣ, ಸಾಂಪ್ರದಾಯಿಕ ಸುತ್ತು ಹಾಗೂ ಈವಿನಿಂಗ್ ಗೌನ್ ಸುತ್ತುಗಳ ಮೂಲಕ ಸ್ಪರ್ಧಿಗಳನ್ನು ಮೌಲ್ಯಮಾಪನ ಮಾಡಲಾಯಿತು. ಮಿಸೆಸ್ ಇಂಡಿಯಾ ಕರ್ನಾಟಕ 2024 ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು ಇವರು ಗಳಿಸಿದ್ದರು.
ಈ ಸ್ಪರ್ಧೆಯಲ್ಲಿ ಟ್ಯಾಲೆಂಟ್ ರೌಂಡ್ ನಲ್ಲಿ ಉತ್ತಮ ಪ್ರದರ್ಶನ ಬಹುಮಾನ , ರ್ಯಾಂಪ್ ವಾಕ್ ಸ್ಪರ್ಧೆಯಲ್ಲಿ ಅತ್ಯುತ್ತಮ ನಡೆ ಬಹುಮಾನ, ಉತ್ತಮ ಟಾಸ್ಕ್ (ಶಾರ್ಟ್ ಫಿಲ್ಮ್) ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿತ್ತು. 2024 ಮೇ.19ರಂದು ಮಂಗಳೂರಿನ ಕದ್ರಿ ಪಾರ್ಕ್ನಲ್ಲಿ ನಡೆದ ಪ್ರತಿಷ್ಠಿತ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಪ್ರಶಸ್ತಿ ಹಾಗೂ ಬಂಟರ ಸಂಘ ಮುಂಬಯಿ ಯುವ ವಿಭಾಗ ಆಯೋಜಿಸಿದ ಆಕಾಂಕ್ಷ ಮಿಸೆಸ್ ಬಂಟ್ಸ್ 2023 ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು ಗಳಿಸಿದ್ದಾರೆ. ಮುಂಡೂರು ಪೊನೋನಿಯಲ್ಲಿ ವಾಸ್ತವ್ಯ ಹೊಂದಿರುವ ನಾರ್ಯಗುತ್ತು ರಘುನಾಥ ಶೆಟ್ಟಿ ಮತ್ತು ಅಮ್ಟೂರು ಬಾಳಿಕೆ ಕಸ್ತೂರಿ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಡಾ.ರಶ್ಮಾ ಎಂ.ಶೆಟ್ಟಿಯವರು ಇವರು ಕಟಪಾಡಿ ಮೂಡುಬೆಟ್ಟು ಹೊಸಮನೆ ಮನೋಹರ್ ಶೆಟ್ಟಿ (ಐನಾಕ್ ಅಪ್ಟಿಕ್ಸ್) ಮತ್ತು ಮುಚ್ಚೂರು ಬರ್ಕೆ ದಿ. ಮಮತಾ ಶೆಟ್ಟಿ (ಮಾಜಿ ಅಧ್ಯಕ್ಷೆ ಮುಲುಂಡ್ ಬಂಟ್ಸ್ ಮಹಿಳಾ ವಿಭಾಗ) ಅವರ ಸೊಸೆ. ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಪೊನೋನಿಯದಲ್ಲಿ ಬೆಳೆದ ಇವರು ಪತಿ ಮೋಹಿತ್ ಶೆಟ್ಟಿ ಹಾಗೂ 7 ವರ್ಷದ ಪುತ್ರಿ ನೇಸರ ಜೊತೆ ಪ್ರಸ್ತುತ ಮುಂಬೈಯಲ್ಲಿ ವಾಸವಾಗಿದ್ದು, ಅಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ವೈದ್ಯಕೀಯ ಸೇವೆಯೊಂದಿಗೆ, ಸಮಾಜ ಸೇವೆಯಲ್ಲೂ ಸಕ್ರಿಯರಾಗಿದ್ದಾರೆ. ಮುಲುಂಡ್ ಹಿಲ್ಸ್ ಇನ್ನರ್ ವೀಲ್ ಕ್ಲಬ್ನ ಸಮಿತಿಯ ಕಾರ್ಯದರ್ಶಿಯಾಗಿ, ಮಹಿಳೆಯರ ಆರೋಗ್ಯ ಮತ್ತು ಜೀವನ ಶೈಲಿಯ ಅಸ್ವಸ್ಥತೆಗಳ ಕುರಿತು ಅನೇಕ ಲೈವ್ ಸೆಮಿನಾರ್ಗಳನ್ನು ನಡೆಸಿದ್ದಾರೆ. ನವಿ ಮುಂಬಯಿಯ ಡಾ. ಡಿವೈ ಪಾಟೀಲ್ ಪ್ರಕೃತಿ ಚಿಕಿತ್ಸೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಡಾ.ರಶ್ಮಾ ಎಂ. ಶೆಟ್ಟಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ಪಾಪೆಮಜಲು ಸರಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿದ್ದು, ನಂತರ ಪುತ್ತೂರು ಕೊಂಬೆಟ್ಟು ಸರಕಾರಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದುಕೊಂಡಿದ್ದಾರೆ. ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪ್ರಕೃತಿ ಚಿಕಿತ್ಸೆ ಪದವಿಯನ್ನು ಪಡೆದು, ರಾಜೀವ್ ಗಾಂಧಿ ವಿಶ್ವವಿದ್ಯಾಲಯದಲ್ಲಿ ಎರಡನೇ ಸ್ಥಾನ ಪಡೆದಿದ್ದರು. ರಾಜ್ಯಮಟ್ಟದ ಅಥ್ಲೆಟಿಕ್ ಮತ್ತು ಥ್ರೋಬಾಲ್ ಆಟಗಾರ್ತಿಯೂ ಇವರು ಗಮನ ಸೆಳೆದಿದ್ದರು.





