ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಮಂಗಳೂರು: ನ್ಯಾಯವಾದಿ ನೌಶಾದ್ ಕಾಶಿಂಜಿ ಕೊಲೆ ಸಹಿತ ಹಲವು ಪ್ರಕರಣಗಳಿಗೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ನೇತೃತ್ವದ ತಂಡ ಮಂಗಳವಾರ ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಹೊಸಮನೆಯ ನಿವಾಸಿ ಟಿ.ದಿನೇಶ್ ಶೆಟ್ಟಿ ಯಾನೆ ದಿನ್ನು ಬಂಧಿತ ಆರೋಪಿ.

ಭೂಗತ ಲೋಕದ ಪಾತಕಿ ರವಿ ಪೂಜಾರಿ ಮತ್ತು ಕಲಿ ಯೋಗೀಶ್‌ರಿಂದ ಸುಪಾರಿ ಪಡೆದು ನ್ಯಾಯವಾದಿ ನೌಶಾದ್ ಖಾಶಿಂಜಿಯವರನ್ನು 2009ರಲ್ಲಿ ಕೊಲೆಗೈದ ಆರೋಪದಲ್ಲಿ ದಿನೇಶ್ ಶೆಟ್ಟಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಆ ಪ್ರಕರಣದಲ್ಲಿ 11 ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಿದ್ದ ಈತ ರಾಜ್ಯ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ 2019ರಲ್ಲಿ ಬಿಡುಗಡೆಗೊಂಡಿದ್ದ.
ಬಳಿಕದ ದಿನಗಳಲ್ಲಿ ಕಾವೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಹರಣ, ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವಂಚನೆ ಮತ್ತು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕಳೆದ ಒಂದೂವರೆ ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ದಿನೇಶ್ ನನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



