ಧರ್ಮಸ್ಥಳ ಪ್ರಕರಣ: ಚಿನ್ನಯ್ಯನಿಗೆ ಷರತ್ತುಬದ್ಧ ಜಾಮೀನು ಮಂಜೂರು
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿ ನ್ಯಾಯಾಲಯಕ್ಕೆ ಸಾಕ್ಷಿ ದೂರುದಾರನಾಗಿ ಬಂದು ಬಳಿಕ ಆರೋಪಿಯಾಗಿ ಜೈಲು ಸೇರಿದ್ದ ಚಿನ್ನಯ್ಯನಿಗೆ ಮಂಗಳೂರು ನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ.24ರಂದು ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.

1 ಲಕ್ಷ ರೂ. ಬಾಂಡ್, ಮಾಧ್ಯಮಗಳಿಗೆ ಹೇಳಿಕೆ ನೀಡದಿರುವುದು ಸೇರಿದಂತೆ 12 ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ಚಿನ್ನಯ್ಯನ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಎಸ್ಐಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು.
ಆರಂಭದಲ್ಲಿ ತಲೆಬುರುಡೆಯೊಂದಿಗೆ ನ್ಯಾಯಾಲಯಕ್ಕೆ ಬಂದ ಚಿನ್ನಯ್ಯ ತಾನು ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಕಾನೂನು ಬಾಹಿರವಾಗಿ ಹೂತು ಹಾಕಿರುವುದಾಗಿ, ಅದರಲ್ಲಿ ಅತ್ಯಾಚಾರಕ್ಕೀಡಾದ ಮಹಿಳೆಯರು, ಹೆಣ್ಣು ಮಕ್ಕಳ ಮೃತದೇಹಗಳೂ ಇದ್ದವು ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದ. ಚಿನ್ನಯ್ಯನ ಹೇಳಿಕೆಯ ಆಧಾರದ ಮೇಲೆಯೇ ಸರಕಾರ ಪ್ರಕರಣಗಳ ಬಗ್ಗೆ ತನಿಖೆಗೆ ಎಸ್ಐಟಿ ರಚನೆ ಮಾಡಿತ್ತು.



