ಬೆಳ್ತಂಗಡಿ: ಬೈಕ್ ಕಳವು ಪ್ರಕರಣ, ಇಬ್ಬರು ಆರೋಪಿಗಳ ಬಂಧನ
ಬೆಳ್ತಂಗಡಿ: ಬೈಕ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.

ನ.11ರಂದು ರಾತ್ರಿ ಕುಕ್ಕೇಡಿ ನಿವಾಸಿ ಸಂಪತ್ ಕುಮಾರ್ ಎಂಬವರು ಪೆಟ್ರೋಲ್ ಖಾಲಿಯಾದ ಕಾರಣ ತನ್ನ ಬೈಕನ್ನು ನಿಟ್ಟಡೆ ಗ್ರಾಮದ ಪಾಣೂರು ಗುರುನಾರಾಯಣ ಸರ್ಕಲ್ ಬಳಿ ನಿಲ್ಲಿಸಿ ಹೋಗಿದ್ದರು. ನ.12ರಂದು ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಈ ಬಗ್ಗೆ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಬೈಕ್ ಪತ್ತೆಯಾಗದ ಹಿನ್ನೆಲೆಯಲ್ಲಿ ನ.13ರಂದು
ವೇಣೂರು ಪೊಲೀಸ್ ಠಾಣೆಯಲ್ಲಿ ಸಂಪತ್ ಕುಮಾರ್ ಪ್ರಕರಣ ದಾಖಲಿಸಿದ್ದರು.
ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ ಕೆರೆಕೋಡಿ ನಿವಾಸಿ ಮಹಮ್ಮದ್ ಇರ್ಷಾದ್(25) ಮತ್ತು ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ನಿವಾಸಿ ಸಾದಿಕ್ ಖಾನ್ (26) ಬಂಧಿತ ಆರೋಪಿಗಳು.
ವೇಣೂರು ಸಬ್ ಇನ್‌ಸ್ಪೆಕ್ಟರ್ ಓಮನ ಮತ್ತು ಸಿಬ್ಬಂದಿ ನ.20ರಂದು ಸಂಜೆ ವೇಣೂರು ಗ್ರಾಮದ ಕೆರೆಕೋಡಿಯಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಇಬ್ಬರು ಯುವಕರು ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಬರುತ್ತಿದ್ದಾಗ ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಯಾವುದೇ ದಾಖಲೆಗಳು ಇಲ್ಲದಿರುವುದು ಬೆಳಕಿಗೆ ಬಂದಿದೆ ಬೈಕ್ ವಶಕ್ಕೆ ಪಡೆದುಕೊಂಡು ಇಬ್ಬರನ್ನು ವೇಣೂರು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಗುರುನಾರಾಯಣ ಸರ್ಕಲ್ ಬಳಿ ನಿಲ್ಲಿಸಿದ ಬೈಕ್ ಕೃಳ್ಳತನ ಮಾಡಿರುವುದಾಗಿ ಬಾಯಿಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಶುಕ್ರವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.





