ಕರಾವಳಿ

ಜಯನಗರ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ‌ ಪತ್ರಕರ್ತರಿಂದ ಪ್ರತಿಭಟನೆ

ಸುಳ್ಯ: ರಸ್ತೆ ಹದಗೆಟ್ಟರೆ ಅದನ್ನು ಮಾಧ್ಯಮದ ಮೂಲಕ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆಯುವ ಪತ್ರಕರ್ತರೇ ಇಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ. ಜಯನಗರ ವಾರ್ಡಿನ ಮುಖ್ಯ ರಸ್ತೆ ಹೊಂಡ ಗುಂಡಿಗಳಿಂದ ತುಂಬಿ ಸಂಚರಿಸಲು ಕಷ್ಟಕರ ಆಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಪತ್ರಕರ್ತ ನಿವಾಸಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ ಘಟನೆ ನ.20ರಂದು ಜಯನಗರದಲ್ಲಿ ನಡೆಯಿತು.

ಹಳೆಗೇಟಿನಿಂದ ಜಯನಗರ ಕುದ್ಪಾಜೆಯವರೆಗೆ ಅಲ್ಲಲ್ಲಿ ರಸ್ತೆಗಳಲ್ಲಿ ಗುಂಡಿ ಆವರಿಸಿ ಸಾರ್ವಜನಿಕರಿಗೆ ವಾಹನಗಳಲ್ಲಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಸ್ಥಳೀಯ ನಿವಾಸಿಗಳು ಅನೇಕ ಬಾರಿ ಹೋರಾಟಗಳನ್ನು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಗಳನ್ನು ನೀಡಿದ್ದು,  ಪತ್ರಿಕೆಯಲ್ಲೂ ವರದಿ ಪ್ರಕಟಗೊಂಡಿತ್ತು. ಆದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪತ್ರಕರ್ತರಾದ  ಹಸೈನಾರ್ ಜಯನಗರ, ಜಯಶ್ರೀ ಕೊಯಿಂಗೋಡಿ, ರೇಖಾ ಹಾಗೂ ಶರೀಫ್ ಜಟ್ಟಿಪಳ್ಳ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಗರ ಪಂಚಾಯತ್ ಮುಖ್ಯ ಅಧಿಕಾರಿ ಬಸವರಾಜ್ ರವರು ರಸ್ತೆ ಅಭಿವೃದ್ಧಿ ಮಾಡುವ ಭರವಸೆಯನ್ನು ಪ್ರತಿಭಟನಾಕಾರರಿಗೆ ನೀಡಿದರು.
ಈ ರೀತಿಯ ಭರವಸೆಗಳನ್ನು ಅನೇಕ ಬಾರಿ ಸಿಕ್ಕಿದೆ, ಆದರೆ  ಕಾರ್ಯಗತ ಆಗಿಲ್ಲ. ಆದ್ದರಿಂದ ನಾಳೆಯೇ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಬೇಕೆಂದು ಪಟ್ಟು ಹಿಡಿದರು.
ಬಳಿಕ ಒಂದು ವಾರದಲ್ಲಿ ಕೆಲಸ ಆರಂಭಿಸುವ ಬಗ್ಗೆ ಅವರು ಭರವಸೆಯನ್ನು ನೀಡಿದರು ಎಂದು ತಿಳಿದು ಬಂದಿದೆ.

ಪ್ರತಿಭಟನಾ ಸ್ಥಳಕ್ಕೆ  ಪತ್ರಕರ್ತರಾದ  ಹರೀಶ್ ಬಂಟ್ವಾಳ್, ದುರ್ಗಾ ಕುಮಾರ್ ನಾಯಕೆರೆ,  ಗಂಗಾಧರ ಕಲ್ಲಪಳ್ಳಿ, ಶಿವಪ್ರಸಾದ್ ಕೇರ್ಪಳ  ಭೇಟಿ ನೀಡಿದರು.

Leave a Reply

Your email address will not be published. Required fields are marked *

error: Content is protected !!