ನಂಜಿ ಇರುವವರು ಬರ್ಕತ್ತಾಗುವುದಿಲ್ಲ: ಶಾಸಕ ಅಶೋಕ್ ರೈ
ಪುತ್ತೂರು: ರಾಜಕೀಯ ಮಾಡಬೇಕಾದ್ದು ಚುನಾವಣೆ ಸಮಯದಲ್ಲಿ ಮಾತ್ರ, ಚುನಾವಣೆ ಕಳೆದ ಬಳಿಕ ಗೆದ್ದವರು ಯಾರೇ ಆಗಲಿ ಅಭಿವೃದ್ದಿ ಕೆಲಸ ಮಾಡಬೇಕು, ಅಭಿವೃದ್ದಿ ಕೆಲಸ ಯಾರೇ ಮಾಡಿದರೂ ಅದಕ್ಕೆ ಎಲ್ಲರೂ ಪಕ್ಷ ಬೇಧ, ಧರ್ಮ ಬೇಧವಿಲ್ಲದೆ ಬೆಂಬಲ ಕೊಡಬೇಕು ಆದರೆ ಪ್ರತೀಯೊಂದಕ್ಕೂ ನಂಜಿ ಕಾರುವವರು ಜನ್ಮದಲ್ಲಿ ಬರ್ಕತ್ತಾಗುವುದಿಲ್ಲ, ನಂಜಿ ಸ್ವಭಾವ ಮನುಷ್ಯನನ್ನು ಹಾಳುಮಾಡುತ್ತದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ನಿಡ್ಪಳ್ಳಿಶಾಂತದುರ್ಗಾ ದೇವಸ್ಥಾನದ ವತಿಯಿಂದ ದಸರಾ ಪ್ರಯುಕ್ತ ನಡೆದ ದಸರಾ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.
ಇಷ್ಟು ವರ್ಷದಲ್ಲಿ ಪುತ್ತೂರಿನಲ್ಲಿ ಒಂದು ಬರ್ಕತ್ತಿನ ಆಸ್ಪತ್ರೆ ಮಾಡ್ಲಿಕ್ಕೆ ಸಾಧ್ಯವಾಗಿಲ್ಲ, ಜನರಿಗೆ ಪ್ರಯೋಜನವಾಗಲಿ ಎಂದು ಮೆಡಿಕಲ್ ಕಾಲೇಜು ತಂದರೆ ಅದಕ್ಕೂ ನಂಜಿ, ಕ್ರೀಡಾಂಗಣ ಮಾಡುವಲ್ಲಿಯೂ ನಂಜಿನ ಮಾತು, ದೇವಸ್ಥಾನ ಅಭಿವೃದ್ದಿ ಮಾಡೋಣ ಎಂದು ಹೊರಟರೆ ಅದಕ್ಕೂ ನಂಜಿ. ಈ ನಂಜಿ ಕಾರಿ ಸಾಧಿಸಿದ್ದಾರೂ ಏನು? ಎಂದು ಪ್ರಶ್ನಿಸಿದ ಶಾಸಕರು ಯಾರೇ ಏನೇ ನಂಜಿ ಕಾರಿದರೂ ನನ್ನಿಂದ ಸಾಧ್ಯವಾದಷ್ಟು ಅನುದಾನವನ್ನು ತಂದು ಪುತ್ತೂರನ್ನು ಅಭಿವೃದ್ದಿ ಮಾಡಿಯೇ ಮಾಡುತ್ತೇನೆ . ಅಭಿವೃದ್ದಿಯಲ್ಲಿ ನಾನು ಎಂದಿಗೂ ರಾಜಕೀಯ ಮಾಡಿಲ್ಲ, ಕಾಂಗ್ರೆಸ್ ,ಬಿಜೆಪಿ ಹಾಗೂ ಇತರೆ ಪಕ್ಷದ ಕಾರ್ಯಕರ್ತರು ನನ್ನ ಬಳಿ ಬರುತ್ತಾರೆ ಇದುವರೆಗೂ ರಾಜಕೀಯ ಮಾಡಿಲ್ಲ ಇನ್ನು ಮಾಡುವುದೂ ಇಲ್ಲ. ಸೋಮವಾರ ದಿನದಂದು ನನ್ನಕಚೇರಿಗೆ ಬರುವ ಯಾರಲ್ಲೂ ಅವರ ಪಕ್ಷ ಯಾವುದೆಂದೂ ಕೇಳದೆ ಸಹಾಯ ಮಾಡುತ್ತಿದ್ದೇನೆ ಎಂದು ಹೇಳಿದರು. ವೇದಿಕೆಯಲ್ಲಿ ನಿಡ್ಪಳ್ಳಿ ವಲಯ ಕಾಂಗ್ರೆಸ್ ಅಧ್ಯಕ್ಷ ಹರೀಶ್, ಅವಿನಾಶ್ ಕುಡ್ಚಿಲ, ಸತೀಶ, ನಾಗೇಶ್ ಉಪಸ್ಥಿತರಿದ್ದರು.