ನಕಲಿ ಆಧಾರ್‌ಕಾರ್ಡ್ ಆರ್‌ಟಿಸಿ ಸೃಷ್ಟಿಸುತ್ತಿದ್ದ ಆರೋಪಿಗಳಿಬ್ಬರ ಸೆರೆ
ಮಂಗಳೂರು: ನಕಲಿ ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರ ಸೃಷ್ಟಿಸಿ ವಂಚಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮುಲ್ಕಿ ಬಪ್ಪನಾಡು ನಿವಾಸಿಗಳಾದ ಅಬ್ದುಲ್ ರಹಾನ್ ಮತ್ತು ನಿಶಾಂತ್ ಬಂಧಿತ ಆರೋಪಿಗಳು. ನಗರದ ದಡ್ಡಲ್ ಕಾಡ್ ಎಂಬಲ್ಲಿ ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿ ಸರಕಾರ, ಬೇರೆ ಬೇರೆ ಇಲಾಖೆಯ ಕಚೇರಿ ಮತ್ತು ನ್ಯಾಯಾಲಯಕ್ಕೆ ವಂಚಿಸುತ್ತಿರುವ ವ್ಯಕ್ತಿಯ ಬಗ್ಗೆ ನಮಗೆ ಮಂಗಳವಾರ ಮಾಹಿತಿ ಲಭಿಸಿತ್ತು. ಅದರಂತೆ ಸ್ಥಳಕ್ಕೆ ತೆರಳಿ ಆರೋಪಿ ಅಬ್ದುಲ್ ರಝಾನ್ ನನ್ನು ವಿಚಾರಿಸಿದಾಗ ಆತ ಕೊಡಿಯಾಲ್ ಬೈಲ್ ಆನ್ ಲೈನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ನಿಶಾಂತ್ ನೊಂದಿಗೆ ಸೇರಿಕೊಂಡು ಆಧಾರ್ ಕಾರ್ಡ್ ನಂಬರ್, ಹೆಸರು, ಪೋನ್ ನಂಬರ್, ವಿಳಾಸ ಮತ್ತು ಪೋಟೋವನ್ನು ಎಡಿಟ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಉರ್ವ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅಬ್ದುಲ್ ರಹ್ಮಾನ್ ಬಳಿ ಎರಡು ಪೋನ್ ಗಳಲ್ಲಿ ಹಲವಾರು ನಕಲಿ ಆಧಾರ್ ಕಾರ್ಡುಗಳು ಪತ್ತೆಯಾಗಿವೆ. ಅಬ್ದುಲ್ ರಹ್ವಾನ್ ಮತ್ತು ನಿಶಾಂತ್ ನಕಲಿ ಆಧಾರ್ ಕಾರ್ಡ್ ಹಾಗೂ ಪಹಣಿ ಪತ್ರಗಳನ್ನು ವಿವಿಧ ಇಲಾಖೆಗಳು ಮತ್ತು
ನ್ಯಾಯಾಲಯದಲ್ಲಿ ಜಾಮೀನು ನೀಡಲು ಸಾರ್ವಜನಿಕರಿಗೆ ನೀಡಿ ವಂಚಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.