ಕರಾವಳಿರಾಜ್ಯ

ಧರ್ಮಸ್ಥಳ ಪ್ರಕರಣ: ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ವೀರೇಂದ್ರ ಹೆಗ್ಗಡೆ

ಬೆಂಗಳೂರು: ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ಮೃತದೇಹಗಳು ಹೂತು ಹಾಕಿರುವ ಕುರಿತ ಆರೋಪಗಳ ಬಗ್ಗೆ ಇದೇ ಮೊದಲ ಬಾರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸಂಸದ ವೀರೇಂದ್ರ ಹೆಗ್ಗಡೆಯರು ಪ್ರತಿಕ್ರಿಯಿಸಿದ್ದಾರೆ. ಈ ಆರೋಪಗಳು ಆಧಾರರಹಿತ ಮತ್ತು ತನಿಖೆಯಿಂದ‌ ಎಲ್ಲ ಸತ್ಯ ಹೊರ ಬರಲಿದೆ ಎಂದು ಹೇಳಿದ್ದಾರೆ.

ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ವೀರೇಂದ್ರ ಹೆಗ್ಗಡೆಯವರು, ಭಕ್ತರನ್ನು ದಾರಿ ತಪ್ಪಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಈ ಆರೋಪಗಳನ್ನು ಮಾಡಲಾಗಿದೆ. ಇದರಿಂದ ತೀವ್ರ ನೋವುಂಟಾಗಿದೆ ಎಂದು ಹೇಳಿದರು.
ಈ ಕುರಿತು ತನಿಖೆಗೆ ಕರ್ನಾಟಕ ಸರಕಾರ ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನು ರಚಿಸಿರುವುದನ್ನು ಸ್ವಾಗತಿಸಿದ‌ ಡಾ ಹೆಗ್ಗಡೆಯವರು, ಎಸ್‌ಐಟಿ ರಚಿಸಿರುವುದು ಒಳ್ಳೆಯದಾಗಿದೆ. ಸತ್ಯ ಎಲ್ಲರಿಗೂ ತಿಳಿಯಲು ಆದಷ್ಟು ಬೇಗ ತನಿಖೆ ಪೂರ್ಣಗೊಳ್ಳಲಿ. ನಾವು ನಮ್ಮ ಎಲ್ಲಾ ದಾಖಲೆಗಳನ್ನು ತೆರೆದಿಟ್ಟಿದ್ದೇವೆ. ತನಿಖೆಗೆ ಸಂಪೂರ್ಣವಾಗಿ ಸಹಕರಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.

ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ವೀರೇಂದ್ರ ಹೆಗ್ಗಡೆ, ಈ ಆರೋಪಗಳು ಸುಳ್ಳಾಗಿದೆ. ಯಾರೇ ಮೃತಪಟ್ಟರೂ ನಾವು ಪಂಚಾಯತ್‌ಗೆ ತಿಳಿಸಿ ಕಾನೂನಿನಂತೆಯೇ ಮುಂದಿನ ಕಾರ್ಯವನ್ನು ನಡೆಸಿದ್ದೇವೆ. ಈಗ ಪ್ರಚಾರದಲ್ಲಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು.

ಸತ್ಯವೇ ಗೆಲ್ಲುತ್ತದೆ, ಈ ಪಿತೂರಿಗಳು ಕೊನೆಗೊಳ್ಳುತ್ತವೆ, ಈ ಎಲ್ಲಾ ಆರೋಪಗಳು ಸುಳ್ಳು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಲೇ ಇದ್ದಾರೆ. ಪೂಜೆ, ಆಚರಣೆಗಳು ಮತ್ತು ಸಂಪ್ರದಾಯಗಳು ಎಂದಿನಂತೆ ನಡೆಯುತ್ತಿವೆ ಮತ್ತು ಧರ್ಮಸ್ಥಳದ ಮೇಲಿನ ನಂಬಿಕೆ ಹಾಗೆಯೇ ಉಳಿದಿದೆ ಎಂದು ಅವರು ಹೇಳಿದರು

Leave a Reply

Your email address will not be published. Required fields are marked *

error: Content is protected !!