ಕರಾವಳಿರಾಜಕೀಯ

ಪಟ್ಟಣ ಪಂಚಾಯತ್ ಚುನಾವಣೆ: ಕಡಬಕ್ಕೆ ಶಾಸಕ ಅಶೋಕ್ ರೈ  ಭೇಟಿ



ಪುತ್ತೂರು: ಕಡಬ ಪಟ್ಟಣ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಶುಕ್ರವಾರ ಶಾಸಕ ಅಶೋಕ್ ರೈ ಅವರು ಕಡಬ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಪ್ರಮುಖರು ಹಾಗೂ ಅಭ್ಯರ್ಥಿಗಳ ಜೊತೆ ಸಮಾಲೋಚನೆ ನಡೆಸಿದರು.


ಪ್ರಥಮ ಬಾರಿಗೆ ಕಡಬ‌ಪಟ್ಟಣ ಪಂಚಾಯತ್ ಚುನಾವಣೆ ನಡೆಯುತ್ತಿದೆ. ಈ ಹಿಂದೆ ಕಡಬ ಗ್ರಾಪಂ ಆಗಿದ್ದ ವೇಳೆ ಇಲ್ಲಿನ‌ ಪ್ರಭುದ್ದ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು. ಇದೀಗ ಕಡಬ ಪಟ್ಟಣ ಪಂಚಾಯತ್ ರಚನೆಯಾದ ಬಳಿಕ ಮೊದಲ ಚುನಾವಣೆ ನಡೆಯುತ್ತಿದೆ.‌ ಕರ್ನಾಟಕದ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಪ್ರತೀಯೊಬ್ಬರಿಗೂ ಸಹಕಾರವಾಗಿದೆ. ಗೃಹಲಕ್ಷ್ಮಿ, ಉಚಿತ ಬಸ್, ಉಚಿತ ಕರೆಂಟ್ ,ಅನ್ನ ಭಾಗ್ಯ ,ಯುವನಿಧಿ ಇವೆಲ್ಲವೂ ಅರ್ಹರಿಗೆ ಕಾಂಗ್ರೆಸ್ ಸರಕಾರ ನೀಡಿದೆ. ಗ್ಯಾರಂಟಿ ಫಲಾನುಭವಿಗಳು ಖಂಡಿತವಾಗಿಯೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ ಎಂಬ ಪೂರ್ಣ ವಿಶ್ವಾಸವಿದೆ ಎಂದು ಶಾಸಕರು ಹೇಳಿದರು.


ಕಳೆದ 35 ವರ್ಷಗಳಿಂದ ಈ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಪಕ್ಷದ ಶಾಸಕರನ್ನು ಗೆಲ್ಲಿಸಿದ ಜನತೆಗೆ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ನಡೆದಿದೆಯೇ ಎಂಬುದನ್ನು ತಿಳಿದುಕೊಂಡಿದ್ದಾರೆ. ಇಲ್ಲಿ ಅಕ್ರಮ ಸಕ್ರಮ ಕಡತ ವಿಲೇವಾರಿಯಾಗಿಲ್ಲ, 94ಸಿ, ಸಿಸಿ ಹಕ್ಕು ಪತ್ರವನ್ನು ನೀಡುವ ಕೆಲಸವನ್ನು ಮಾಡಿಲ್ಲ, ಇದೆಲ್ಲವೂ ಇಲ್ಲಿನ ಮತದಾರರಿಗೆ ಗೊತ್ತಿದೆ. ಬಡವರ ಪರ ಇರುವುದು ಕಾಂಗ್ರೆಸ್ ಮಾತ್ರ ಎಂಬುದು ಗ್ಯಾರಂಟಿ ಯೋಜನೆಯೊಂದೇ ಸಾಕ್ಷಿಯಾಗಿದೆ. ಕಡಬದ ಮತದಾರರು ಪ್ರಬುಧ್ದರಾಗಿದ್ದು ಅಭಿವೃದ್ದಿ ಪರ, ಬಡವರ ಪರ ಇರುವ ಕಾಂಗ್ರೆಸ್ಸನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು.


ವೇದಿಕೆಯಲ್ಲಿ ಪಕ್ಷದ ಪ್ರಮುಖರಾದ ಎಂ ಎಸ್ ಮಹಮ್ಮದ್, ಬ್ಲಾಕ್ ಅಧ್ಯಕ್ಷ ಅಭಿಲಾಷ್, ಕೃಷ್ಣಪ್ಪ,ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ್, ಬೊಂಡಾಲ‌ ಚಿತ್ತರಂಜನ್ ಶೆಟ್ಟಿ,ಸುಬಾಸ್ ಚಂದ್ರ ಶೆಟ್ಟಿ, ವಿಜಯಕುಮಾರ್ ಸೊರಕೆ, ನೂರುದ್ದೀನ್ ಸಾಲ್ಮರ, ಉಷಾ ಅಂಚನ್, ಪಿ ಪಿ ವರ್ಗಿಸ್ ಸೇರಿದಂತೆ ಪಕ್ಷದ ಪ್ರಮುಖರು,ಕಾರ್ಯಕರ್ತರು, ಅಭ್ಯರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!