ದ.ಕ ಜಿಲ್ಲೆಯಲ್ಲಿ ಮರಳು ಸಾಗಾಟಕ್ಕೆ ಆನ್ ಲೈನ್ ವ್ಯವಸ್ಥೆ; ಹೊಸ APPಗೆ ಚಾಲನೆ
ಮಂಗಳೂರ: : ದ.ಕ. ಜಿಲ್ಲೆಯಲ್ಲಿ ನಾನ್-ಸಿಆರ್‌ಝಡ್ ಪ್ರದೇಶದಲ್ಲಿ ಗುರುತಿಸಿ ಮಂಜೂರಾಗಿರುವ 15 ಮರಳು ಬ್ಲಾಕ್‌ಗಳಲ್ಲಿನ ಮರಳು ದಾಸ್ತಾನನ್ನು ಸಾರ್ವಜನಿಕರಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ ‘ಡಿಕೆ ಸ್ಯಾಂಡ್ ಬಝಾರ್’ ಆ್ಯಪ್ ಮೂಲಕ ಪೂರೈಸಲು ಮರಳು ಉಸ್ತುವಾರಿಯ ಜಿಲ್ಲಾ ಸಮಿತಿ ತೀರ್ಮಾನಿಸಿದೆ. ಮರಳನ್ನು ಸಾಗಾಟ ಮಾಡಲು ಇಚ್ಛಿಸುವವರು ತಮ್ಮ ವಾಹನವನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಿರುವ DK SAND BAZAAR APP ನಲ್ಲಿ ನೋಂದಾಯಿಸಬಹುದು.

ಪರಿಸರ ವಿಮೋಚನಾ ಪತ್ರದಲ್ಲಿ 15 ಮರಳು ಬ್ಲಾಕ್‌ಗಳಲ್ಲಿ 3,30,405 ಮೆಟ್ರಿಕ್ ಟನ್ ಮರಳು ಗಣಿಗಾರಿಕೆ ಮಾಡಲು ಲಭ್ಯವಿದೆ. ಪ್ರತೀ ವರ್ಷ ಜೂನ್ 5ರಿಂದ ಅಕ್ಟೋಬರ್ 15ರವರೆಗೆ ಮರಳು ಗಣಿ ಗುತ್ತಿಗೆ ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಿಷೇಧವಿರುತ್ತದೆ. ಅದರಂತೆ ಜಿಲ್ಲೆಯಲ್ಲಿ ಗಣಿ ಗುತ್ತಿಗೆ ಪ್ರದೇಶದಲ್ಲಿ ಮರಳುಗಾರಿಕೆ ನಿಷೇಧವಿರಲಿದೆ. ಮರಳು ದಾಸ್ತಾನು ಕೇಂದ್ರಗಳಲ್ಲಿ ಲಭ್ಯವಿರುವ ಒಟ್ಟು 27,550 ಮೆ.ಟನ್‌ಗಳಲ್ಲಿ ಮಾರ್ಚ್ 2025ರಿಂದ ಇಲ್ಲಿಯವರೆಗೆ 12,126 ಮೆ.ಟನ್ ಅನ್ನು ಬುಕ್ಕಿಂಗ್ ಆ್ಯಪ್ ಮುಖಾಂತರ ವಿತರಿಸಲಾಗಿದೆ ಎಂದು ಎಂದು ಹಿರಿಯ ಭೂವಿಜ್ಞಾನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮರಳು ಗಣಿ ಗುತ್ತಿಗೆ ದಾಸ್ತಾನು ಕೇಂದ್ರದಲ್ಲಿ ಲಭ್ಯವಿರುವ 15,424 ಮೆ. ಟನ್ ಮರಳನ್ನು dksandbazaar.com ವೆಬ್‌ಸೈಟ್‌ನಲ್ಲಿ ಬುಕ್ ಮಾಡಿ ಕೊಳ್ಳಬಹುದಾಗಿದೆ. ಯಾವುದೇ ಕಾರಣಕ್ಕೂ ಹೊರ ಜಿಲ್ಲೆಗೆ ಮರಳು ಪೂರೈಸಲು ಅವಕಾಶವಿರುವುದಿಲ್ಲ. ಹೆಚ್ಚಿನ ಮಾಹಿತಿ ಮತ್ತು ಡಿಕೆ ಸ್ಯಾಂಡ್ ಬಝಾರ್ ಬುಕ್ಕಿಂಗ್ ನಲ್ಲಿ ಯಾವುದೇ ತಾಂತ್ರಿಕ ತೊಂದರೆಯಿದ್ದಲ್ಲಿ ಗಣಿ ಮತ್ತು ಭೂಜ್ಞಾನ ಇಲಾಖೆ ಹಿರಿಯ (0824-2429932/6364019555) ಸಂಪರ್ಕಿಸಬಹುದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ