ಅ.20: ರೈ ಚಾರಿಟೇಬಲ್ ಟ್ರಸ್ಟ್‌ನಿಂದ ಸಾಮೂಹಿಕ ದೀಪಾವಳಿ ಆಚರಣೆ
ಪುತ್ತೂರು: ಶಾಸಕರಾದ ಅಶೋಕ್ ರೈ ನೇತೃತ್ವದಲ್ಲಿ ನಡೆಯುವ 13 ನೇ ವರ್ಷದ ಸಾಮೂಹಿಕ ದೀಪಾವಳಿ ಕಾರ್ಯಕ್ರಮವು ಅಕ್ಟೋಬರ್ 20 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದ್ದು ಈ ಬಾರಿ ಸುಮಾರು 1 ಲಕ್ಷ ಮಂದಿಗೆ ವಸ್ತ್ರದ ಜೊತೆಗೆ ಗಿಫ್ಟ್ ವಿತರಣೆ ನಡೆಯಲಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಅವರು ತಿಳಿಸಿದರು.

ಶಾಸಕರ ಕಚೇರಿ ಸಭಾಂಗಣದಲ್ಲಿ ನಡೆದ ರೈ ಎಸ್ಟೆಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ಸಭೆಯಲ್ಲಿ ಅವರು ಮಾತನಾಡಿದರು.
ಅ.20ರಂದು ದೀಪಾವಳಿಯ ಮೊದಲನೇ ದಿನದಂದು ಕಾರ್ಯಕ್ರಮ ನಡೆಯಲಿದೆ. ಕಳೆದ ಬಾರಿ ಸುಮಾರು 85 ಸಾವಿರ ಮಂದಿಗೆ ವಸ್ತ್ರದಾನ ಮಾಡಲಾಗಿದೆ. ಈ ಬಾರಿ ಒಂದು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು ವಸ್ತ್ರದ ಜೊತೆಗೆ ಮನೆ ಬಳಕೆಗೆ ಯೋಗ್ಯವಾದ ಗಿಫ್ಟ್‌ನ್ನು ವಿತರಣೆ ಮಾಡಲಾಗುವುದು. ಎಂದಿನಂತೆ ಅನ್ನದಾನವೂ ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಹಿತ ಗಣ್ಯರು ಆಗಮಿಸಲಿದ್ದಾರೆ. ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಜಾತಿ, ಮತ, ಧರ್ಮ ಬೇದವಿಲ್ಲದೆ ಎಲ್ಲರೂ ಸಾಮೂಹಿಕವಾಗಿ ದೀಪಾವಳಿ ಆಚರಣೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಈ ಬಾರಿಯೂ ಗೂಡುದೀಪ ಸ್ಪರ್ದೆ ನಡೆಯಲಿದೆ. ಈ ಬಾರಿ ಮಕ್ಕಳಿಗೆ, ಮತ್ತು ಹಿರಿಯರಿಗೆ ಪ್ರತ್ಯೇಕ ಬಹುಮಾನವನ್ನು ನೀಡಲಾಗುವುದು ಎಂದು ಶಾಸಕರು ತಿಳಿಸಿದರು.
ಪ್ರತೀ ಗ್ರಾಮಕ್ಕೆ ತೆರಳಿ ಟ್ರಸ್ಟ್ ಸದಸ್ಯರು ಗ್ರಾಮಸ್ಥರಿಗೆ ಆಹ್ವಾನ ನೀಡಲಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಪ್ರತೀ ಗ್ರಾಮದಲ್ಲಿ ಸಭೆಗಳು ನಡೆಯಲಿದ್ದು ಆ ಸಭೆಯ ಮೂಲಕ ಗ್ರಾಮಸ್ಥರನ್ನು, ಸಾರ್ವಜನಿಕರನ್ನು ಆಹ್ವಾನಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಕಾರ್ಯಕ್ರಮದ ರೂಪುರೇಶೆ ಬಗ್ಗೆ ಟ್ರಸ್ಟ್‌ನ ಗೌರವ ಸಲಹೆಗಾರರಾದ ಸುಮಾ ಅಶೋಕ್ ರೈ ಅವರು ಮಾಹಿತಿ ನೀಡಿದರು.
ಟ್ರಸ್ಟ್‌ನ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ, ಉಮಾನಾಥ ಶೆಟ್ಟಿ ಪೆರ್ನೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಜೋಕಿಂ ಡಿಸೋಜಾ, ಪ್ರವೀಣ್‌ಚಂದ್ರ ಆಳ್ವ, ಕೃಷ್ಣ ಪ್ರಸಾದ್ ಆಳ್ವ, ಜಯಪ್ರಕಾಶ್ ಬದಿನಾರ್, ಕುಂಬ್ರ ದುರ್ಗಾಪ್ರಸಾದ್ ರೈ, ಪಂಜಿಗುಡ್ಡೆ ಈಶ್ವರಭಟ್, ರಾಧಾಕೃಷ್ಣ ನಾಯ್ಕ್ ಸೇರಿದಂತೆ ಟ್ರಸ್ಟ್‌ನ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಟ್ರಸ್ಟ್‌ನ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ಸ್ವಾಗತಿಸಿ ವಂದಿಸಿದರು. ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಲಿಂಗಪ್ಪ ಸಹಕರಿಸಿದರು.