ಕಾಂಗ್ರೆಸ್ ಅಲ್ಪ ಸಂಖ್ಯಾತ ನಾಯಕರಿಗೆ ಶೋಕಾಸ್ ನೋಟೀಸ್: ರಮಾನಾಥ ರೈ ತೀವ್ರ ಅಸಮಾಧಾನ
ತಮ್ಮ ಸಮುದಾಯಕ್ಕೆ ನೋವಾದಾಗ ಅದನ್ನು ಆ ಸಮುದಾಯದವರು, ನಾಯಕರು ಆಕ್ರೋಶ, ಅಸಮಾಧಾನ ವ್ಯಕ್ತ ಪಡಿಸುವುದು ಸಹಜ. ಪಕ್ಷದ ವತಿಯಿಂದ ಶೋಕಾಸ್ ನೋಟೀಸು ಜಾರಿ ಮಾಡಿ ಶಿಸ್ತು ಕ್ರಮದ ಎಚ್ಚರಿಕೆ ನೀಡುವುದು ಸರಿಯಲ್ಲ ಎಂದು ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರೂ ಆಗಿರುವ ಬಿ ರಮಾನಾಥ ರೈ ತಿಳಿಸಿದ್ದಾರೆ.
ಸೋಮವಾರ ಬಿ.ಸಿ.ರೋಡಿನ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ತಾವು ಪ್ರತಿನಿಧಿಸುವ ಸಮುದಾಯಕ್ಕೆ ನೋವಾದಾಗ ಆ ಸಮುದಾಯದ ನಾಯಕರಾಗಿ ತಮಗಾದ ನೋವನ್ನು ವ್ಯಕ್ತಪಡಿಸುವುದು, ಆಗಿರುವ ಅನ್ಯಾಯವನ್ನು ಪ್ರಶ್ನಿಸುವುದು ಸಹಜವಾಗಿದೆ. ಈ ನಿಟ್ಟಿನಲ್ಲಿ ಅಮಾಯಕ ಯುವಕನ ಕಗ್ಗೊಲೆ ಬಗ್ಗೆ ಪಕ್ಷದ ಕೆಲ ಅಲ್ಪಸಂಖ್ಯಾತ ಮುಖಂಡರು ಅವರ ಸಮುದಾಯಕ್ಕಾದ ಅನ್ಯಾಯ ನೋವನ್ನು ತೋರಿಸಲು ಹಾಗೂ ನ್ಯಾಯಕ್ಕಾಗಿ ಆಗ್ರಹಿಸಲು ಸಭೆ ಕರೆದಿದ್ದರು. ಇದು ಸಹಜ ಪ್ರಕ್ರಿಯೆ. ಇದ್ಯಾವುದೂ ಪಕ್ಷದ ಮೇಲಿನ ದ್ವೇಷದಿಂದಾಗಿ ಅಲ್ಲ. ಬದಲಾಗಿ ತಮ್ಮ ನೋವನ್ನು ತೋರಿಸುವ ಸಲುವಾಗಿ ಆಗಿದೆ. ಆದರೆ ಅಂತಹವರಿಗೆ ಪಕ್ಷದ ವತಿಯಿಂದ ಶೋಕಾಸ್ ನೋಟೀಸು ಜಾರಿ ಮಾಡಿ ಶಿಸ್ತು ಕ್ರಮದ ಎಚ್ಚರಿಕೆ ಸರಿಯಾದ ಕ್ರಮದಲ್ಲಿ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಜಾತ್ಯಾತೀತ ಶಕ್ತಿಗಳು ವಿಘಟನೆ ಆಗಬಾರದು. ಜಾತ್ಯಾತೀತ ಶಕ್ತಿಗಳು ದುರ್ಬಲವಾದರೆ ಮತೀಯ ಶಕ್ತಿಗಳು ವಿಜೃಂಭಿಸಲು ಅವಕಾಶ ಮಾಡಿದಂತಾಗುತ್ತದೆ. ಪಕ್ಷದೊಳಗಿನ ವಿಚಾರವನ್ನು ನೋವಾದ ಸಮುದಾಯದ ಮಂದಿಗಳನ್ನು ಕರೆದು ವಿಚಾರಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ನಿಜವಾದ ನಾಯಕತ್ವದ ಗುಣ. ಈ ಸಂದರ್ಭದಲ್ಲಿ ನಾಯಕರಾದವರು ಪ್ರಜ್ಞಾವಂತಿಕೆ ಮೆರೆಯಬೇಕು. ಈ ಬಗ್ಗೆ ಪಕ್ಷದ ವರಿಷ್ಠರು ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಂಟ್ವಾಳದಲ್ಲಿ ಧರ್ಮಾಧಾರಿತ ಹತ್ಯೆಗಳು ಮತ್ತೆ ನಡೆದಿರುವುದು ತೀವ್ರ ಖೇದಕರ. ಅಬ್ದುಲ್ ರಹಿಮಾನ್ ಹತ್ಯೆ ಹಾಗೂ ಖಲಂದರ್ ಶಾಫಿ ಮೇಲಿನ ಹತ್ಯಾ ಯತ್ನ ಘಟನೆ ಎಂಬುದು ಮಾನವೀಯತೆಗೇ ಸವಾಲಾಗಿ ನಡೆದಿರುವುದು ಅತ್ಯಂತ ವಿಷಾದನೀಯ. ಇಂತಹ ಘಟನೆಗಳು ತೀವ್ರ ಖಂಡನೀ ಎಂದು ರಮಾನಾಥ ರೈ ಹೇಳಿದ್ದಾರೆ.