ಕರಾವಳಿ

ಎ.24 ರಿಂದ ಮೇ.18ರ ವರೆಗೆ ಉಳ್ಳಾಲ ಉರೂಸ್ ಸಮಾರಂಭ

ಮಂಗಳೂರು: ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿ ಪಡೆದಿರುವ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಇದರ 22ನೇ ಪಂಚವಾರ್ಷಿಕ 432ನೇ ವಾರ್ಷಿಕ ಉರೂಸ್ ಸಮಾರಂಭವು ಖಾಝಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಎಪ್ರಿಲ್ 24 ರಿಂದ ಮೇ 18ರ ವರೆಗೆ ದರ್ಗಾ ವಠಾರದಲ್ಲಿ ನಡೆಯಲಿದೆ.


ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಎಪ್ರಿಲ್ 24 ರಂದು ಅಸರ್ ನಮಾಝ್ ಬಳಿಕ ವಾರ್ಷಿಕ ದ್ಸಿಕ್ರ್ ಮಜ್ಲಿಸ್ ಹಾಗೂ ಉರೂಸ್ ಉದ್ಘಾಟನೆ ನಡೆಯಲಿದೆ. ಅದೇ ದಿನ ದರ್ಗಾ ಝಿಯಾರತ್ ನೇತೃತ್ವವನ್ನು ಸಯ್ಯಿದ್ ಆಟ್ಟಕೋಯ ತಂಙಳ್ ವಹಿಸಲಿದ್ದಾರೆ. ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ನಡೆಯುವ ಉರೂಸ್ ಕಾರ್ಯಕ್ರಮವನ್ನು ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಎಪ್ರಿಲ್ 25 ರಿಂದ ಮೇ 14ವರೆಗೆ ಪ್ರಮುಖ ಧಾರ್ಮಿಕ ಮುಖಂಡರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ ಎಂದು ಹೇಳಿದ್ದಾರೆ.

ಮೇ 16 ರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಾಮಾಜಿಕ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸ್ಪೀಕರ್ ಯುಟಿ ಖಾದರ್, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವ ಝಮೀರ್ ಅಹ್ಮದ್, ಪೌರಾಡಳಿತ ಸಚಿವ ರಹೀಮ್ ಖಾನ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಂಸದ ಕ್ಯಾ.ಬೃಜೇಶ್ ಚೌಟ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಮೇ18 ರಂದು ನಡೆಯುವ ಅನ್ನದಾನ ಕಾರ್ಯಕ್ರಮದಲ್ಲಿ ಐದು ಲಕ್ಷ ಭಕ್ತಾದಿಗಳು ಸೇರುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!