ಸೊರಕೆ: ಲಾರಿ ಡಿಕ್ಕಿಯಾಗಿ ರಿಕ್ಷಾ ಪಲ್ಟಿ ಮೂವರು ಮಹಿಳೆಯರಿಗೆ ಗಾಯ
ಪುತ್ತೂರು: ಆಟೋ ರಿಕ್ಷಾಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮಹಿಳೆಯರು ಗಾಯಗೊಂಡ ಘಟನೆ ಸರ್ವೆ ಗ್ರಾಮದ ಸೊರಕೆ ಕರ್ಮಿನಡ್ಕ ಎಂಬಲ್ಲಿ ಫೆ.19ರಂದು ನಡೆದಿದೆ.

ಸರ್ವೆ ಕಡೆಗೆ ಹೋಗುತ್ತಿದ್ದ ಲಾರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ, ಡಿಕ್ಕಿಯ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದೆ. ಅವಿನಾಶ್ ಎಂಬವರ ರಿಕ್ಷಾದಲ್ಲಿ ಕರ್ಮಿನಡ್ಕದ ಸರೋಜಿನಿ, ವೇದಾವತಿ ಹಾಗೂ ಮಾಲತಿ ಎಂಬವರು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಮೂವರೂ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಸರೋಜಿನಿ ಅವರು ಗಂಭೀರ ಗಾಯಗೊಂದಿರುವುದಾಗಿ ತಿಳಿದು ಬಂದಿದೆ. ರಿಕ್ಷಾ ಚಾಲಕ ಅವಿನಾಶ್ ಅವರಿಗೂ ಸಣ್ಣ ಪುಟ್ಟ ಗಾಯವಾಗಿದ್ದು ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರಾದ ಅಶೋಕ ನಾಯ್ಕ ಸೊರಕೆ ಅವರು ತಮ್ಮ ಕಾರಿನಲ್ಲಿ ಗಾಯಾಳುಗಳನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ವ್ಯವಸ್ಥೆಯನ್ನು ಮಾಡಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.