ಜಿಲ್ಲೆ

ದೇವಸ್ಥಾನದ ಕಾರ್ಯಕ್ರಮದಲ್ಲಿ ವಕ್ಫ್ ವಿಚಾರ ಎತ್ತಿದ ಯತ್ನಾಳ್: ಸಾರ್ವಜನಿಕರ ಆಕ್ರೋಶ



ಬಾಗಲಕೋಟೆ: ಧಾರ್ಮಿಕ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಕ್ಫ್ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಸಾರ್ವಜನಿಕರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ವಿದ್ಯಮಾನ ತೇರದಾಳ ಪಟ್ಟಣದಲ್ಲಿ ಇಂದು ನಡೆದಿದೆ. ಪಟ್ಟಣದ ಅಲ್ಲಮಪ್ರಭು ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಯತ್ನಾಳ್ ಅವರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಲ್ಲಮಪ್ರಭು ದೇವಸ್ಥಾನ ಉದ್ಘಾಟನೆಗೆ ಆಗಮಿಸಿದ್ದ ಯತ್ನಾಳ್, ತಮ್ಮ ಭಾಷಣದಲ್ಲಿ 8 ಎಕರೆ ವಕ್ಫ್ ಅಂತಾ ನಮೂದಾಗಿತ್ತು. ಈ ರೀತಿ ಕಾಂಗ್ರೆಸ್ ನವರು ಮಾಡ್ಕೊಂತ ಹೊಂಟಾರ ಎನ್ನುತ್ತಿರುವಾಗಲೇ ರಾಜಕೀಯ ಮಾತನಾಡಬೇಡಿ ಎಂದು ಸಾರ್ವಜನಿಕರ ಆಕ್ಷೇಪ ವ್ಯಕ್ತಪಡಿಸಿದರು.

ಇದು ರಾಜಕೀಯನಾ ಎಂದು ಮರು ಪ್ರಶ್ನೆ ಹಾಕಿದ ಯತ್ನಾಳ್ ಮಾತಿಗೆ ಹೌದು, ನೀವು ಮಾತನಾಡುತ್ತಿರುವುದು ರಾಜಕೀಯ ಎಂದು ವಿರೋಧಿಸಿದರು. ಸರ್ವ ಧರ್ಮಿಯರೆಲ್ಲಾ ಸೇರಿ ವಂತಿಗೆ ಮೂಲಕ ನಿರ್ಮಿಸಿರುವ ದೇವಾಲಯ ಇದು. ಇಲ್ಲಿ ರಾಜಕೀಯ ಮಾಡಬೇಡಿ ಎಂದು ಯತ್ನಾಳ್ ಅವರಿಗೆ ಭಕ್ತರು ಕ್ಲಾಸ್ ತೆಗೆದುಕೊಂಡಿದ್ದಾರೆ. ಮುಜುಗರಕ್ಕೀಡಾದ ಯತ್ನಾಳ್ ಜನರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ವೇದಿಕೆಯಿಂದ ಇಳಿದು ಹೋಗಿದ್ದಾರೆ. ಇತ್ತೀಚೆಗೆ ವಿವಾದಾತ್ಮಕ ಭಾಷಣಗಳ ಮೂಲಕ ಸುದ್ದಿಯಾಗುತ್ತಿರುವ ಯತ್ನಾಳ್ ಗೆ ಜನರೇ ತರಾಟೆಗೆತ್ತಿಕೊಳ್ಳುವ ಮೂಲಕ ದ್ವೇಷ ಭಾಷಣಕ್ಕೆ ಬ್ರೇಕ್ ಹಾಕಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *

error: Content is protected !!