ಮಹಿಳಾ ಕ್ರಿಕೆಟ್: ಇಂಗ್ಲೆಂಡ್ ವಿರುದ್ದ ಭಾರತಕ್ಕೆ ಸುಲಭ ಜಯ
ಇಂಗ್ಲೆಂಡ್ ತಂಡದ ವಿರುದ್ಧ ರವಿವಾರ ನಡೆದ ಮೊದಲ ಮಹಿಳಾ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಸ್ಮೃತಿ ಮಂದಾನಾ ಅವರ ಆಕರ್ಷಕ 91 ರನ್‍ಗಳ ನೆರವಿನಿಂದ ಏಳು ವಿಕೆಟ್‍ಗಳ ಸುಲಭ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ.
ಹರ್ಮನ್ ಪ್ರೀತ್ ಸಿಂಗ್ ಟಾಸ್ ಗೆದ್ದು ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಜೂಲನ್ ಗೋಸ್ವಾಮಿಯವರ ಬೌಲಿಂಗ್ ದಾಳಿಯಿಂದ ಅತಿಥೇಯ ತಂಡವನ್ನು ಭಾರತ 227 ರನ್‍ಗಳಿಗೆ ಕಟ್ಟಿಹಾಕಿತು. ಗೋಸ್ವಾಮಿ 42 ಎಸೆತಗಳಲ್ಲಿ ಒಂದೂ ರನ್ ನೀಡದೇ ಗಮನ ಸೆಳೆದರು. ಇಂಗ್ಲೆಂಡಿನ ಕೆಳ ಮಧ್ಯಮ ಕ್ರಮಾಂಕದ ಸಾಹಸದಿಂದಾಗಿ ಅತಿಥೇಯ ತಂಡ ಗೌರವಾರ್ಹ ಮೊತ್ತ ತಲುಪಿತು.
ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೆ ಸ್ಮೃತಿ ಮಂದಾನಾ 99 ಎಸೆತಗಳಲ್ಲಿ 91 ರನ್ ಸಿಡಿಸಿದರು.
ಉದಯೋನ್ಮುಖ ಆಟಗಾರ್ತಿ ಯಸ್ಟಿಕಾ ಭಾಟಿಯಾ 47 ಎಸೆತಗಳಲ್ಲಿ 50 ರನ್ ಗಳಿಸಿ, ಮೂರನೇ ಅರ್ಧಶತಕ ದಾಖಲಿಸಿದರು. ಯಸ್ಟಿಕಾ- ಮಂದಾನಾ ಜೋಡಿ ಕೇವಲ 16.1 ಓವರ್ ಗಳಲ್ಲಿ ಎರಡನೇ ವಿಕೆಟ್‍ಗೆ 96 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಹರ್ಮನ್ ಪ್ರೀತ್ 94 ಎಸೆತಗಳಲ್ಲಿ 74 ರನ್ ಗಳಿಸುವ ಮೂಲಕ ಮಂದಾನಾ ಜತೆಗೆ 99 ರನ್ ಗಳ ಜತೆಯಾಟಕ್ಕೆ ಕಾರಣರಾದರು. ಮಂದಾನಾ ಇನಿಂಗ್ಸ್ ನಲ್ಲಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದೆ.