ಉಪ್ಪಿನಂಗಡಿ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ
ಪುತ್ತೂರು: 34ನೇ ನೆಕ್ಕಿಲಾಡಿ ಗ್ರಾಮದ ಆದರ್ಶ ನಗರದ ಕಜೆ ಎಂಬಲ್ಲಿರುವ ಅಡಿಕೆ ತೋಟವೊಂದರಲ್ಲಿ ಅಕ್ರಮವಾಗಿ ಜಾನುವಾರನ್ನು ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ, ಸೆ.21ರಂದು ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಅವಿನಾಶ್ ಹೆಚ್ ರವರು ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದು ಈ ವೇಳೆ ಕೃತ್ಯದಲ್ಲಿ ತೊಡಗಿದ್ದ ಐದು ಮಂದಿ ಓಡಿ ತಪ್ಪಿಸಿಕೊಂಡಿದ್ದಾರೆ.
ಓಡಿ ತಪ್ಪಿಸಿಕೊಂಡ ಆರೋಪಿಗಳನ್ನು ರಫಿಕ್, ನಝೀರ್, ಉಬೈದ್, ಅಶ್ರಫ್ ಹಾಗೂ ನಿಜಾಮುದ್ದೀನ್ ಎಂದು ಗುರುತಿಸಲಾಗಿದೆ. ಸ್ಥಳದಲ್ಲಿ ಅಂದಾಜು ರೂ 24,000/-ಮೌಲ್ಯದ 96 ಕೆ.ಜಿ ದನದ ಮಾಂಸ, ದೇಹದ ಅಂಗಾಂಗಗಳು, ಮಾಂಸ ಮಾಡಲು ಬಳಸಿದ ಚೂರಿಗಳು, ಕಬ್ಬಿಣದ ಎಲೆಕ್ಟ್ರೋನಿಕ್ ತೂಕ ಮಾಪನ ಹಾಗೂ ಇತರ ಸೊತ್ತುಗಳು, 2 ಅಟೋರಿಕ್ಷಾಗಳು, 1 ಮೊಟಾರ್ ಸೈಕಲ್ ಪತ್ತೆಯಾಗಿದೆ.
ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದು, ಆರೋಪಿಗಳ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 107/2024 ಕಲಂ:12 ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಕಲಂ: 3(5) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಿಸಲಾಗಿದೆ.