ಕ್ರೈಂರಾಷ್ಟ್ರೀಯ

ಯೂಟ್ಯೂಬ್ ನೋಡಿ ಸರ್ಜರಿ ಮಾಡಿದ ನಕಲಿ ವೈದ್ಯ: ಬಾಲಕ ಬಲಿ



ಯೂಟ್ಯೂಬ್ ನೋಡಿ ನಕಲಿ ವೈದ್ಯ ಸರ್ಜರಿ ಮಾಡಿದ ಪರಿಣಾಮ 17 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಸರನ್ ಎಂಬಲ್ಲಿ ನಕಲಿ ವೈದ್ಯ ಯೂಟ್ಯೂಬ್ ವೀಡಿಯೋವನ್ನು ಅನುಸರಿಸಿ ಬಾಲಕನ ಪಿತ್ತಕೋಶದಲ್ಲಿರುವ ಕಲ್ಲನ್ನು ತೆಗೆಯುವುದಕ್ಕೆ ಆಪರೇಷನ್ ಮಾಡಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಬಾಲಕನನ್ನು ಪಾಟ್ನಾದ ಬೇರೆ ಆಸ್ಪತ್ರೆಗೆ ಕರೆದೊಯ್ಯುವುದಕ್ಕೆ ಅಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿದ್ದಾರೆ. ಮಾರ್ಗ ಮಧ್ಯೆ ಬಾಲಕ ಮೃತಪಟ್ಟಿದ್ದು, ದೇಹವನ್ನು ಆಸ್ಪತ್ರೆಯಲ್ಲಿ ಬಿಟ್ಟು ವೈದ್ಯರು ಹಾಗೂ ಜೊತೆಗಿದ್ದವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಬಾಲಕನು ಅನೇಕ ಬಾರಿ ವಾಂತಿ ಮಾಡುತ್ತಿದ್ದರಿಂದ ಆತನನ್ನು ಸರನ್ ನಗರದಲ್ಲಿರುವ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿ ಅಡ್ಮಿಟ್ ಮಾಡಿಸಿದೆವು. ವಾಂತಿ ನಿಂತಿತ್ತು. ಆದರೆ ವೈದ್ಯ ಅಜಿತ್ ಕುಮಾರ್ ಪುರಿ ಈತನಿಗೆ ಆಪರೇಷನ್ ಅಗತ್ಯ ಇದೆ. ಆಪರೇಷನ್ ಮಾಡಬೇಕು ಎಂದರು. ಆದರೆ ಅವರು ಯೂಟ್ಯೂಬ್ ವೀಡಿಯೋವನ್ನು ನೋಡಿ ಆಪರೇಷನ್ ಮಾಡಿದ್ದರಿಂದ ನನ್ನ ಮಗ ಜೀವ ಕಳೆದುಕೊಂಡ ಎಂದು ಚಂದನ್ ಶಾ ತಿಳಿಸಿದ್ದಾರೆ.

ಮೃತ ಬಾಲಕನ ಅಜ್ಜ ಮಾತನಾಡಿ, ಬಾಲಕನ ತಂದೆಯನ್ನು ಬೇರೆ ಕೆಲಸದ ಮೇರೆಗೆ ಹೊರಗಡೆ ಕಳುಹಿಸಿದ್ದರು. ಕುಟುಂಬದವರ ಅನುಮತಿ ಪಡೆಯದೇ ಅವರು ಬಾಲಕನನ್ನು ಕರೆದುಕೊಂಡು ಹೋಗಿ ಆಪರೇಷನ್ ಮಾಡಿದ್ದಾರೆ. ಬಾಲಕ ನೋವಿನಿಂದ ಕಿರುಚಿದ್ದನ್ನು ನೋಡಿ ಏನಾಯಿತು ಎಂದು ವೈದ್ಯರನ್ನು ಪ್ರಶ್ನಿಸಿದರೆ, ನಾವು ವೈದ್ಯರು ಎಂದು ಎದುರುತ್ತರಿಸಿದರು. ಸಂಜೆಯ ಸುಮಾರಿಗೆ ಬಾಲಕನ ಶವವನ್ನು ಆಸ್ಪತ್ರೆಯ ಮೆಟ್ಟಿಲಲ್ಲಿ ಇಟ್ಟು ಪರಾರಿಯಾಗಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!