ಗೃಹಲಕ್ಷ್ಮೀ ಯೋಜನೆಯ ಹಣ ಕೂಡಿಟ್ಟು ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟ ಅತ್ತೆ..!
ಗೃಹಲಕ್ಷ್ಮೀ ಯೋಜನೆಯ ಹಣವನ್ನ ಕೂಡಿಟ್ಟು ಅನೇಕ ಮಹಿಳೆಯರು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿ ಸುದ್ದಿಯಾಗಿದ್ದರು. ಕೆಲ ದಿನಗಳ ಹಿಂದೆ ಮಹಿಳೆಯೊಬ್ಬರು ಊರವರಿಗೆ ಹೋಳಿಗೆ ಊಟ ಹಾಕಿ ಸುದ್ದಿಯಾಗಿದ್ದರು. ಇದೀಗ ಗೃಹಲಕ್ಷ್ಮೀ ಯೋಜನೆಯ ಹಣವನ್ನ ಕೂಡಿಟ್ಟು ಅತ್ತೆಯೊಬ್ಬರು ಸೊಸೆಗಾಗಿ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟ ಅಪರೂಪದ ಘಟನೆಗೆ ಹಾವೇರಿ ಜಿಲ್ಲೆಯಲ್ಲಿ ವರದಿಯಾಗಿದೆ.
ಗೃಹಲಕ್ಷ್ಮಿ ಹಣದಲ್ಲಿ ಒಂದು ಪೈಸೆಯನ್ನೂ ಪೋಲು ಮಾಡದ ಅತ್ತೆ ಕಳೆದ 10 ತಿಂಗಳಿಂದ ಅಷ್ಟನ್ನೂ ಕೂಡಿಟ್ಟು, 20 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹಿಸಿ ಸೊಸೆಯ ಕೈಗೆ ಕೊಟ್ಟಿದ್ದಾರೆ. ನೀರಲಗಿ ಗ್ರಾಮದ ದ್ರಾಕ್ಷಾಯಿಣಿ ತಮ್ಮ 10 ಕಂತಿನ ಗೃಹಲಕ್ಷ್ಮಿ ಹಣ ಕೂಡಿಟ್ಟಿದ್ದರು. 10 ಕಂತಿನ 20,000 ರೂಪಾಯಿ ಹಣ ಕೂಡಿಟ್ಟು ಸೊಸೆ ಕುಮಾರಿ ಶಿವನಗೌಡ ಪಾಟೀಲ್ಗೆ ಮನೆಯಲ್ಲೇ ಫ್ಯಾನ್ಸಿ ಸ್ಟೋರ್ ಇಟ್ಟುಕೊಟ್ಟಿದ್ದಾರೆ. ಅತ್ತೆಯ ಮಾದರಿ ಕಾರ್ಯ ಕಂಡು ನೀರಲಗಿ ಗ್ರಾಮಸ್ಥರು ಮೆಚ್ಚುಗೆ ಸೂಚಿಸಿದ್ದಾರೆ. ಅತ್ತೆ-ಸೊಸೆ ಸಂತೋಷದಿಂದ ಫ್ಯಾನ್ಸಿ ಸ್ಟೋರ್ ಶುರು ಮಾಡಿದ್ದಾರೆ. ಚೆನ್ನಾಗಿ ವ್ಯಾಪಾರ ಆಗಲಿ ಎಂದು ಊರವರು ಹರಸಿದ್ದಾರೆ ಎನ್ನಲಾಗಿದೆ.