ಸವಣೂರು: ಬಸ್ ನಿಲ್ದಾಣ ಬಳಿ ಬಸ್ ನಿಲ್ಲಿಸಿಲ್ಲವೆಂದು ಕೆ ಎಸ್ ಆರ್ ಟಿ ಸಿ ಚಾಲಕನಿಗೆ ಸಿಬ್ಬಂದಿಯಿಂದ ಹಲ್ಲೆ ಆರೋಪ: ಪೊಲೀಸರಿಗೆ ದೂರು
ಪುತ್ತೂರು: ಬಸ್ ನಿಲ್ಲಿಸಿಲ್ಲವೆಂದು ಗುತ್ತಿಗೆ ಆಧಾರದಲ್ಲಿ ನೇಮಕವಾದ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನಿಗೆ ಕೆಎಸ್ಆರ್ ಟಿಸಿ ಸಿಬ್ಬಂದಿಯೊಬ್ಬರು ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕಿನ ಸವಣೂರಿನಲ್ಲಿ ನಡೆದಿದೆ.
ಘಟನೆಯ ಬಳಿಕ ಹಲ್ಲೆಗೊಳಗಾದ ಬಸ್ ಚಾಲಕ ಆಸ್ಪತ್ರೆಗೆ ಧಾಖಲಾಗಿದ್ದು ಘಟನೆ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹಲ್ಲೆ ನಡೆಸಿದ್ದಾರೆ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸವಣೂರು ಪೆಟ್ರೋಲ್ ಪಂಪ್ ಬಳಿಯ ಬಸ್ ನಿಲ್ದಾಣದಲ್ಲಿ ನಿಂತಿದ್ದ ಕೆಎಸ್ ಆರ್ ಟಿಸಿ ಸಿಬ್ಬಂದಿ ವ್ಯಕ್ತಿಯೊಬ್ಬರು ಬಸ್ ನಿಲ್ದಾಣ ಸಮೀಪ ಬಸ್ ನಿಲ್ಲಿಸಿಲ್ಲವೆಂದು ಆರೋಪಿಸಿ ಚಾಲಕ ಭರತ್ ಎಂಬವರಿಗೆ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ಉಲ್ಲೆಖಿಸಲಾಗಿದೆ.
ಬಸ್ ನಿಲ್ದಾಣದ ಬಿಟ್ಟು ಕೆಲವು ಮೀಟರ್ ದೂರದಲ್ಲಿ ನಿಲ್ಲಿಸಿದಾಗ ಬಸ್ ಗೆ ಹತ್ತಿದ ಸಿಬ್ಬಂದಿ ಚಾಲಕನಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕೂಡಲೇ ಚಾಲಕ ಬಸ್ ನಿಲ್ಲಿಸಿ ಬಸ್ ನಿಂದ ಇಳಿದಿದ್ದಾರೆ. ಬಸ್ ನಲ್ಲಿದ್ದ ಸಹಪ್ರಯಾಣಿಕರು ಘಟನೆಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಭರತ್ ಒಂದು ವರ್ಷದ ಹಿಂದೆಯಷ್ಟೇ ಗುತ್ತಿಗೆ ಆಧಾರದಲ್ಲಿ ಉದ್ಯೋಗ ಪಡೆದಿದ್ದರು. ಹಲ್ಲೆಗೊಳಗಾದ ಚಾಲಕ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.