ಬಿಜೆಪಿ, ಜೆಡಿಎಸ್ ದೋಸ್ತಿ ಪಾದಯಾತ್ರೆ ಮುಗಿಯುತ್ತಿದ್ದಂತೆ ಬಿಜೆಪಿ ಅತೃಪ್ತ ನಾಯಕರ ಸಭೆ..!
ಅತ್ತ ಮುಡಾ ವಿಚಾರವಾಗಿ ಬಿಜೆಪಿ ಮತ್ತು ಜೆಡಿಎಸ್ ದೋಸ್ತಿ ಪಾದಯಾತ್ರೆ ಮುಗಿಯುತ್ತಿದ್ದಂತೆ ಇತ್ತ ಬಿಜೆಪಿಯ ಬಂಡಾಯ ಟೀಂ ಆ್ಯಕ್ಟೀವ್ ಆಗಿ ರಂಗಕ್ಕಿಳಿದಿದೆ. ಆ ಮೂಲಕ ಬಿಜೆಪಿಯೊಳಗೆ ಎಲ್ಲವೂ ಸರಿಯಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವವನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ವಿರೋಧಿಸುವ ತಂಡ ಒಟ್ಟಾಗಿ ಸಭೆ ಸೇರಿ ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆ.
ಬೆಳಗಾವಿಯ ಹೊರವಲಯದಲ್ಲಿ 10ಕ್ಕೂ ಹೆಚ್ಚು ಬಿಜೆಪಿಯ ಘಟಾನುಘಟಿ ನಾಯಕರು ಗೌಪ್ಯ ಸಭೆ ನಡೆಸಿರುವುದು ಇದೀಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಬೆಳಗಾವಿಯ ಹೊರವಯಲದಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ರೆಬೆಲ್ ನಾಯಕರು ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ 10ಕ್ಕೂ ಹೆಚ್ಚು ಮಂದಿ ಬಿಜೆಪಿ ನಾಯಕರು ಭಾಗಿಯಾಗಿದ್ದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಿಜೆಪಿ ಶಾಸಕ ಯತ್ನಾಳ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು ಬಿಎಸ್ವೈ ಮಾಜಿ ಆಪ್ತ ಸಹಾಯಕ ಕೂಡಾ ಭಾಗಿಯಾಗಿದ್ದಾರೆ ಎನ್ನಲಾಗಿದೆ.ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್ ಸಿಂಹ, ಅಣ್ಣಾಸಾಹೇಬ್ ಜೊಲ್ಲೆ, ಕುಮಾರ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ ಭಾಗಿಯಾಗಿದ್ದರು.
ಬಳ್ಳಾರಿ ಪಾದಯಾತ್ರೆಗೆ ಬಿಜೆಪಿ ರೆಬೆಲ್ ಮುಖಂಡರು ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ವಾಲ್ಮೀಕಿ ನಿಗಮ ಹಗರಣ, SC, ST ಅನುದಾನ ದುರ್ಬಳಕೆಗೆ ವಿರೋಧ ಹೋರಾಟಕ್ಕೆ ಚಿಂತನೆ ನಡೆಸಲಾಗಿದೆ. ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆಗೆ ಮುಖಂಡರು ಪ್ಲ್ಯಾನ್ ಮಾಡಿಕೊಂಡಿದ್ದು ಹೈಕಮಾಂಡ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿ ಬಳಿಕ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದ್ದು ಈ ಎಲ್ಲ ವಿಚಾರಗಳ ಅಧಿಕೃತ ಮಾಹಿತಿ ಇನ್ನಷ್ಟೇ ಲಾಭ್ಯವಾಗಬೇಕಿದೆ. ರೆಬೆಲ್ ನಾಯಕರ ತೀರ್ಮಾನಕ್ಕೆ ಕೇಂದ್ರ ನಾಯಕರ ಅನುಮತಿ ಸಿಗುತ್ತಾ ಎನ್ನುವುದು ಕೂಡಾ ಕುತೂಹಲ ಮೂಡಿಸಿದೆ.