ಕುಂಬ್ರ: ರಸ್ತೆ ಬದಿ ನಿಂತಿದ್ದ ಮಹಿಳೆಗೆ ಕಾರು ಡಿಕ್ಕಿ
ಪುತ್ತೂರು: ರಸ್ತೆ ಬದಿ ನಿಂತಿದ್ದ ಮಹಿಳೆಗೆ ಕಾರು ಡಿಕ್ಕಿ ಹೊಡೆದು ಮಹಿಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ಆ.5ರಂದು ನಡೆದಿದೆ.
ಒಳಮೊಗರು ಗ್ರಾಮದ ಖತೀಜಮ್ಮ (69.ವ) ಅವರು ಕುಂಬ್ರದಲ್ಲಿರುವ ತನ್ನ ಅಣ್ಣನ ಮನೆಗೆ ಹೋಗಿ ಹಿಂತಿರುಗಿ ಮನೆಗೆ ಬರುವ ಸಲುವಾಗಿ ಕುಂಬ್ರದಲ್ಲಿರುವ ಸರ್ವೀಸ್ ಸ್ಟೇಷನ್ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದಾಗ, ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ವಿಶಾಖ ಎಂಬವರು ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು ಈ ವೇಳೆ ಖತೀಜಮ್ಮ ಅವರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಖತೀಜಮ್ಮ ಅವರ ಮಗ ಸಂಶುದ್ದೀನ್ ಮತ್ತು ಡಿಕ್ಕಿ ಹೊಡೆದ ಕಾರಿನ ಚಾಲಕ ಖತೀಜಮ್ಮ ಅವರನ್ನು ಉಪಚರಿಸಿ ಕಾರಿನಲ್ಲಿ ಪುತ್ತೂರು ಹಿತಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಜಾಗರೂಕತೆ ಮತ್ತು ತೀವ್ರ ನಿರ್ಲಕ್ಷತನದಿಂದ ಕಾರು ಚಲಾಯಿಸಿಕೊಂಡು ಬಂದ ಪರಿಣಾಮ ಕಾರು ಡಿಕ್ಕಿಯಾಗಿದೆ ಎಂದು ಖತೀಜಮ್ಮ ಅವರು ನೀಡಿರುವ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.