ಕೊಳ್ತಿಗೆ: ಹಾಡಹಗಲೇ ಮಹಿಳೆಯ ಚಿನ್ನದ ಸರವನ್ನು ಎಗರಿಸಿದ ಆರೋಪಿಗಳನ್ನು ಬಂಧಿಸಿದ ಬೆಳ್ಳಾರೆ ಪೊಲೀಸರು
ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ತಿಗೆ ಗ್ರಾಮದ ಪಾಂಬಾರ್ ಎಂಬಲ್ಲಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಹಾಡಹಗಲೇ ಎಗರಿಸಿದ ಇಬ್ಬರು ಆರೋಪಿಗಳನ್ನು ಬೆಳ್ಳಾರೆ ಪೊಲೀಸರ ವಿಶೇಷ ತಂಡ ಬಂಧಿಸಿದೆ.
ಪುತ್ತೂರು ನರಿಮೊಗರು ಗ್ರಾಮದ ಮುಕ್ವೆ ನಿವಾಸಿ ನೌಶಾದ್ ಬಿ ಎ (36.ವ) ಮತ್ತು ಸುಲಿಗೆಗೆ ಸಹಕರಿಸಿದ ಕಾಸರಗೋಡು ಉದ್ಯಾವರ ನಿವಾಸಿ ಚಂದ್ರಮೋಹನ್ (42. ವ) ಬಂಧಿತ ಆರೋಪಿಗಳು.
ಬಂಧಿತರಿಂದ ರೂ 80,000/- ಮೌಲ್ಯದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ರೂ 1,00,000/- ಮೌಲ್ಯದ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ. ಬಿ ರಿಷ್ಯಂತ್ ಐ ಪಿ ಎಸ್ ರವರು, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಕೆ ಎಸ್ ಪಿ ಎಸ್ ಮತ್ತು ರಾಜೇಂದ್ರ ಕೆಎಸ್ಪಿಎಸ್ ರವರುಗಳ ಮುಂದಾಳತ್ವದಲ್ಲಿ, ಅರುಣ್ ನಾಗೇಗೌಡ, ಪೊಲೀಸ್ ಉಪಾಧೀಕ್ಷಕರು ಪುತ್ತೂರು ಉಪವಿಭಾಗರವರ ನೇತೃತ್ವದ, ಸುಳ್ಯ ವೃತ್ತ ನಿರೀಕ್ಷಕರಾದ ಮೋಹನ್ ಕೊಠಾರಿ ರವರು, ಬೆಳ್ಳಾರೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರುಗಳಾದ ಸಂತೋಷ್ ಬಿ ಪಿ ರವರು ಮತ್ತು ಅಶೋಕ್ ಸಿಎಂ ರವರ ಎರಡು ವಿಶೇಷ ತನಿಖಾ ತಂಡಗಳು ಕಾರ್ಯಾಚರಿಸಿರುತ್ತದೆ. ಸದ್ರಿ ತನಿಖಾ ತಂಡದಲ್ಲಿ ಎ ಎಸ್ ಐ ದಾಮೋದರ ನಾಯ್ಕ, ಸಿಬ್ಬಂದಿಗಳಾದ ನವೀನ್ ಕಟ್ಟತ್ತಾರು , ಸತೀಶ್ ಬಿ, ಕೃಷ್ಣಪ್ಪ, ಚಂದ್ರಶೇಖರಗೌಡ, ಚಂದ್ರಶೇಖರ ಗೆಜ್ಜಳ್ಳಿ, ಮಂಜುನಾಥ, ಚೇತನ, ಪ್ರವೀಣ ಬಾರ್ಕಿ, ಸಂತೋಷ ಕೆ ಜಿ, ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ, ಸಂಪತ್ ರವರುಗಳು ಕಾರ್ಯನಿರ್ವಹಿಸಿರುತ್ತಾರೆ .
ಸದ್ರಿ ತನಿಖಾ ತಂಡದ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿದ್ದು, ಸಾರ್ವಜನಿಕ ವಲಯದಲ್ಲಿಯೂ ಪ್ರಶಂಸೆ ವ್ಯಕ್ತವಾಗಿದೆ.