ಸುಳ್ಯ: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಸುಳ್ಯ: ರಾಜ್ಯ ಕಾಂಗ್ರೆಸ್ ಸರಕಾರದ ರೈತ ವಿರೋಧಿ ನೀತಿ, ಜನ ವಿರೋಧಿ ನಿಲುವು ಖಂಡಿಸಿ ರಾಜ್ಯದಲ್ಲಿ ಬರ ಘೋಷಿಸುವಂತೆ ಆಗ್ರಹಿಸಿ ಸುಳ್ಯದಲ್ಲಿ ಬಿಜೆಪಿ ಮಂಡಲ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ಸುಳ್ಯ ತಾಲೂಕು ಕಚೇರಿ ಎದುರು ನಡೆಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿದೆ.5 ಗ್ಯಾರಂಟಿಗಳನ್ನು ನೀಡುತ್ತಾ ಬಂದ ಸರಕಾರ ಇದೀಗ ರೈತ ವಿರೋಧಿ ನೀತಿ ಅಳವಡಿಸಿದೆ. ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 6 ಸಾವಿರದ ಜತೆ ರಾಜ್ಯ 4 ಸಾವಿರ ನೀಡುತ್ತಿತ್ತು. ಅದನ್ನು ಈ ಸರಕಾರ ನಿಲ್ಲಿಸಿದೆ. ರೈತ ವಿದ್ಯಾನಿಧಿ ಯೋಜನೆ ರದ್ದುಗೊಳಿಸಿದೆ. ಎಪಿಎಂಸಿ ಕಾಯ್ದೆ ವಾಪಸ್ ಪಡೆದು ರೈತರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಕಾರ್ಯಕರ್ತರು ಪಡೆಯುತ್ತಿದ್ದಾರೆಂದು ಬ್ಲಾಕ್ ಕಾಂಗ್ರೆಸ್ ನೀಡಿದ ಹೇಳಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಕಂಜಿಪಿಲಿ ಅವರು ಗ್ಯಾರಂಟಿ ಯೋಜನೆಗೆ ಕಾಂಗ್ರೆಸ್ ನವರು ಕೈಯಿಂದ ಸ್ವಂತ ದುಡ್ಡು ಹಾಕಿ ಕೊಡುವುದಲ್ಲ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಕಾಂಗ್ರೆಸ್ ಸರಕಾರ ಬಿಜೆಪಿ ತಂದ ಯೋಜನೆಗಳನ್ನು ರದ್ದುಗೊಳಿಸಿ ರಾಜ್ಯದ ಜನರಿಗೆ ಮತ್ತು ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದರು.
ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ,
ಪುತ್ತೂರು ತಾ.ಪಂ. ಮಾಜಿ ಸದಸ್ಯೆ ಪುಲಸ್ತ್ಯ ರೈ, ತಾಲೂಕು ಬಿಜೆಪಿ ಮೋರ್ಚಾ ಅಧ್ಯಕ್ಷ ರಮೇಶ್ ಕಲ್ಪುರೆ ಮಾತನಾಡಿ ಕಾಂಗ್ರೆಸ್ ಸರಕಾರವನ್ನು ಟೀಕಿಸಿದರು.
ಮಹಿಳಾ ಮೋರ್ಚಾ ಅಧ್ಯಕ್ಷೆ ಶುಭದಾ ಎಸ್.ರೈ, ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಎಸ್.ಎನ್. ಮನ್ಮಥ ಸಹಿತ ಪ್ರಮುಖರು ಉಪಸ್ಥಿತರಿದ್ದರು.
ನ.ಪಂ. ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಮಹೇಶ್ ರೈ ಮೇನಾಲ ವಂದಿಸಿದರು.
ಪ್ರತಿಭಟನೆಯ ಬಳಿಕ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.