Uncategorized

ದೀಪಾವಳಿ-ಸಂಸ್ಕಾರ-ಸಂಸ್ಕೃತಿ-ಆಡಂಬರ



✍🏻ಬಾಲಕೃಷ್ಣ ಕಣ್ಣಾರಾಯ, ಬನೇರಿ ಮುಂಡೂರು

ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಪಾವಿತ್ರ್ಯತೆ ಹಾಗೂ ಹಿನ್ನೆಲೆ ಇದೆ. ಹಬ್ಬ ಮಾತ್ರ ಏಕೆ ಮದುವೆ,ಉಪನಯನ,ಸೀಮಂತ,ನಾಮಕರಣ, ಸತ್ಯನಾರಾಯಣ ಪೂಜೆ, ದುರ್ಗಾ ಪೂಜೆ ಎಲ್ಲದಕ್ಕೂ ಸಕಾರಣವಾದ ವಿಧಿ ವಿಧಾನಗಳಿವೆ. ಆವುಗಳೆಲ್ಲಾ ಅದ್ರಂತೆ ನಡೆದರೇನೇ ಚೆಂದ ಹಾಗೂ ಅರ್ಥಪೂರ್ಣ.

ಹಾಗಾಗುತ್ತಿದೆಯೇ? ಖಂಡಿತಾ ಇಲ್ಲ. ಬರಬರುತ್ತಾ ಎಲ್ಲವೂ ಆಡಂಬರಕ್ಕೆ ಪ್ರಥಮ ಆದ್ಯತೆ. ಉದಾಹರಣೆಗೆ ದೀಪಾವಳಿಯನ್ನು ಯಾಕೆ ಆಚರಿಸುತ್ತೇವೆ ಅನ್ನೋದೆ ಹೆಚ್ಚಿನ ಯುವಪೀಳಿಗೆಗೆ ಗೊತ್ತಿಲ್ಲ. ಇದಕ್ಕೆ ಕಾರಣಗಳು ಹಲವಾರು. ದೀಪಾವಳಿ ಅಂದರೆ ಪಟಾಕಿ ಅನ್ನುವಲ್ಲಿಗೆ ಬಂದು ಮುಟ್ಟಿದೆ. ಆಧುನಿಕತೆಯ ಈ ಕಾಲದಲ್ಲಿ ವಿಷಯ ಸಂಗ್ರಹವೇನೂ ಕಷ್ಟವಲ್ಲ. ಯುವ ಪೀಳಿಗೆ ಇಷ್ಟೊಂದು ಇಂಟರ್ನೆಟ್ ಉಪಯೋಗಿಸುತ್ತಿರುವಾಗ ಈ ಹಬ್ಬಗಳ ಅಥವಾ ನಾವು ಆಚರಿಸುವ ವಿಶೇಷ ಕಾರ್ಯಕ್ರಮಗಳ ಮಹತ್ವ ಅರಿಯಲು Google ನ ಸಹಾಯ ಪಡೆಯಬಹುದು. ಇದು ಖಂಡಿತ ಈ ಬಗೆಗಿನ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಸಹಾಯಕಾರಿ.

ಬಹುಶಃ ಇಂದಿನ ಪೀಳಿಗೆ ಈ ಪ್ರಯತ್ನ ಮಾಡುವುದಿಲ್ಲ ಸಮಯದ ಅಭಾವವೂ ಇರಬಹುದು. ಆದರೆ ಇಂತಹ ಪ್ರಯತ್ನ ಅಗತ್ಯ. ನಮ್ಮ ಧರ್ಮದ ಬಗ್ಗೆ ಮಾತ್ರವಲ್ಲ ನಾವು ಮಾಡುವ ಕರ್ಮಗಳ ಬಗ್ಗೆ ಯಾಕೆ ಏನು ಅನ್ನೋ ಪರಿಜ್ಞಾನವಿರುವುದು ಒಳ್ಳೆಯದಲ್ಲವೆ. ಇತರರು ಕೇಳುವಾಗ ಅದು ಇದಕ್ಕಾಗಿ ಅನ್ನುವಷ್ಟು ಅಥವಾ ನಮ್ಮ ಆತ್ಮತೃಪ್ತಿಗಾದರೂ ಈ ಬಗ್ಗೆ ಜ್ಞಾನ ವೃದ್ಧಿಗೊಳಿಸುವುದು ಮತ್ತು ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಿ ಅವರ ಸಂಸ್ಕಾರ ಸಂಸ್ಕೃತಿ ಸಂಪದ್ಭರಿತ ವಾಗುವಂತೆ ಸಹಕರಿಸುವುದು ಸೂಕ್ತವಲ್ಲವೆ.

ಎಲ್ಲವನ್ನೂ ಬಿಟ್ಟು ಬರೇ ಆಡಂಬರಕ್ಕೇ ಮಹತ್ವ ಕೊಟ್ಟರೆ ಏನು ಪ್ರಯೋಜನ? ನಾವು ಮಾಡುವ ದೇವತಾ ಕಾರ್ಯಗಳು ಯಾವ ಧರ್ಮದವರೇ ಇರಲಿ ಆಡಂಬರಕ್ಕೆ ಪ್ರಾಮುಖ್ಯತೆ ನೀಡಿದಾಗ ಅವನು ಮಾಡುವ ಅಥವಾ ಮಾಡಿಸುವ ಪೂಜೆಯಲ್ಲಿ ಗಮನವಿರದೆ VIP ಗಳನ್ನು ಉಪಚರಿಸುವುದೇ ಮುಖ್ಯವಾಗುತ್ತದೆ. ಪೂಜೆಯ ಮಧ್ಯೆ ಎದ್ದು ಉಪಚರಿಸಿ ಬರುವ ನಿದರ್ಶನಗಳೂ ಇವೆ. ಹಾಗೆಯೇ ಮದುವೆಯಲ್ಲಿ ಸಪ್ತಪದಿ ತುಳಿಯುತ್ತಿರುವ ಪ್ರಕ್ರಿಯೆಯ ಮಧ್ಯೆ VIP ಗಳು ವಧು ವರರಿಗೆ Wish ಮಾಡಿದ ಸಂದರ್ಭಗಳೂ ಇವೆ. ಕೆಲವು ದೊಡ್ಡ ದೊಡ್ಡ ಹೋಮ ಹವನಗಳನ್ನು ಮಾಡಿಸುವುದೇ ಆಡಂಬರಕ್ಕೇ ಅನ್ನುವುದಕ್ಕೆ ನಿದರ್ಶನಗಳಿವೆ. ಒಮ್ಮೆ ನನಗೆ ಸಂಬಂಧಿಯೊಬ್ಬಳು ಚಂಡಿಕಾಹೋಮಕ್ಕೆ ಆಹ್ವಾನಿಸಿದಾಗ ಯಾಕೆ ಏನಾದರೂ ಹರಕೆ ಹೊತ್ತಿದ್ದಾರೋ ಎಂದು ಕೇಳಿದಾಗ ಇಲ್ಲಪ್ಪ, ಮಾವನಿಗೆ ಮಗಳು ಅಳಿಯ ವಿದೇಶದಿಂದ ಬರುವಾಗ Status ಗೋಸ್ಕರ ಮಾಡಿಸಬೇಕೂಂತ ಹಾಗೆ ಮಾಡಿಸೋದು ಅಂದಳು. ಆಯ್ತಪ್ಪಾಂತ ಹೋದೆ. ಹಿಂದೆ ನಾನೆಂದೂ ಕಂಡಿರದ ರೀತಿಯ ವಿಜೃಂಭಣೆ ಮತ್ತು ಆಡಂಬರದಿಂದ ನಡೆದಿತ್ತು ಹೋಮ ಹವನ. ಹೀಗಿರುವಾಗ ಅಂತಹ ಹೋಮ ಹವನಗಳು ಅರ್ಥವನ್ನೇ ಕಳೆದುಕೊಳ್ಳುತ್ತವೆ.

ಹಬ್ಬಗಳೇ ಆಗಲಿ, ಇತರ ಶುಭ ಕಾರ್ಯಗಳೇ ಆಗಲಿ ಅವುಗಳ ಉದ್ದೇಶ ಹಾಗೂ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳುವಷ್ಟಾದರೂ ಪರಿಜ್ನಾನ ನಮ್ಮಲ್ಲಿರಲಿ, ಆಡಂಬರಕ್ಕೆ ಮಹತ್ವ ಕಡಿಮೆಯಾಗಲಿ, ಈ ದೀಪಾವಳಿಯ ಬೆಳಕು ಶಾಂತಿ ಸೌಹಾರ್ದತೆಯೊಂದಿಗೆ ಈ ಸದ್ಬುದ್ಧಿಯನ್ನೂ ನಮಗೆ ಕರುಣಿಸಲಿ ಎಂದು ಆಶಿಸೋಣವೆ. ಇನ್ನೊಮ್ಮೆ ಸಜ್ಜನರಿಗೆಲ್ಲ ದೀಪಾವಳಿಯ ಶುಭಾಶಯಗಳು.


Leave a Reply

Your email address will not be published. Required fields are marked *

error: Content is protected !!