ಕರಾವಳಿಕ್ರೈಂ

ಕಡಬದಲ್ಲಿ ನಾಲ್ಕು ಕಳ್ಳತನ ಪ್ರಕರಣ: ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ನ್ಯಾಯಾಲಯಕ್ಕೆ ಹಾಜರು


ಕಡಬ: ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಲ್ಕು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಹಾರಾಷ್ಟ್ರ ಮೂಲದ ಆರೋಪಿ ವಿಶಾಲ್ ಪೊಂಕೆ (30) ಕೊನೆಗೂ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ.



ಕಡಬ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ದಾಖಲಾಗಿದ್ದ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ದೊಡ್ಡಬಳ್ಳಾಪುರದ ನರಸಿಂಹ ಅಲಿಯಾಸ್ ರಾಜು, ಮಹಾರಾಷ್ಟ್ರದ ವಿಜಯ್ ಸುರೇಶ್ ಪೊಂಕೆ, ನವೀನ್ ಚಂದ್ರ ಸಿಂಗ್, ಉತ್ತರ ಕನ್ನಡದ ಚಂದ್ರಕಾಂತ್ ಪೂಜಾರಿ ಹಾಗೂ ಮಂಡ್ಯದ ಪ್ರಕಾಶ್ ಬಹದ್ದೂರ್ ಆರೋಪಿಗಳಾಗಿದ್ದರು. ಈ ಪ್ರಕರಣಗಳ ವಿಚಾರಣೆ ನಡೆಸಿದ ಪುತ್ತೂರಿನ ಮಾನ್ಯ ACJ ಮತ್ತು JMFC ನ್ಯಾಯಾಲಯವು ಆರೋಪಿಗಳಿಗೆ ಈಗಾಗಲೇ ಎರಡು ವರ್ಷಗಳ ಶಿಕ್ಷೆ ವಿಧಿಸಿತ್ತು.


ಈ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಶಾಲ್ ಪೊಂಕೆ ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಈತನ ಪತ್ತೆಗಾಗಿ ಪೊಲೀಸರು ಪ್ರಯತ್ನ ನಡೆಸಿ, ನ್ಯಾಯಾಲಯದಿಂದ ಪ್ರೊಕ್ಲಮೇಷನ್ (ಪ್ರಕಟಣೆ) ಹೊರಡಿಸಲಾಗಿತ್ತು.

ಇದೀಗ ಅಕ್ಟೋಬರ್ 30ರಂದು ಆರೋಪಿ ವಿಶಾಲ್ ಪೊಂಕೆ ನ್ಯಾಯಾಲಯಕ್ಕೆ ಹಾಜರಾಗಿದ್ದು, ಪುತ್ತೂರಿನ 2ನೇ ACJ ಮತ್ತು JMFC ನ್ಯಾಯಾಲಯ (ಸಂಚಾರಿ ನ್ಯಾಯಾಲಯ, ಕಡಬ) ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ವಿಶಾಲ್ ಪೊಂಕೆ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ MOB ತೆರೆಯಲಾಗಿದ್ದು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ದಾಖಲಾಗಿರುವ ಕಳ್ಳತನ ಪ್ರಕರಣವೊಂದೂ ವಿಚಾರಣೆಯಲ್ಲಿದೆ.

Leave a Reply

Your email address will not be published. Required fields are marked *

error: Content is protected !!