ಗ್ರಾ.ಪಂಗೆ ತಾಕತ್ತಿದ್ದರೆ ಎಲ್ಲಾ ಅನಧಿಕೃತ ಕಟ್ಟಡಗಳ ಪಟ್ಟಿ ಬಹಿರಂಗಪಡಿಸಿ ಧ್ವಂಸಗೊಳಿಸಲಿ: ಬಾಬು ಎನ್ ಸವಣೂರು
ಪುತ್ತೂರು: ಬೆಳಂದೂರಿನಲ್ಲಿ ಬಡ ವ್ಯಾಪಾರಿಯ ಗೂಡಂಗಡಿ ಧ್ವಂಸಗೊಳಿಸಿರುವ ಗ್ರಾ.ಪಂ.ನ ಕೃತ್ಯವನ್ನು ಎಸ್ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಬಾಬು ಎನ್ ಸವಣೂರು ರವರು ಖಂಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು ದೇಶದಲ್ಲಿ ನಿರುದ್ಯೋಗ ಮತ್ತು ಬಡತನ ಸಮಸ್ಯೆ ತಾಂಡವಾಡುತ್ತಿದೆ,ಯುವಕರು ಕೆಲಸವಿಲ್ಲದೆ ಕುಟುಂಬ ಸಾಕುವ ಸಮಸ್ಯೆಯಲ್ಲಿದ್ದಾರೆ, ಹಲವಾರು ಯುವಕರು ನಿರುದ್ಯೋಗ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇನ್ನೂ ಹಲವರು ಕಲಿತ ವಿಧ್ಯೆಗೆ ತಕ್ಕಂತೆ ಕೆಲಸವೂ ಇಲ್ಲ ಸಂಬಲವೂ ಇಲ್ಲವೆಂದು ವಿದೇಶಗಳಿಗೆ ಹೋಗಿ ದುಡಿಯುತ್ತಿದ್ದಾರೆ.
ಇದೆರೆಡೆಯಲ್ಲಿ ಹಲವಾರು ಮಂದಿ ಸರ್ಕಾರದ ಉದ್ಯೋಗಕ್ಕೆ ಕಾಯದೆ ಸಣ್ಣಪುಟ್ಟ ಬಂಡವಾಳ ಹಾಕಿ ಸ್ವಂತವಾಗಿ ತಳ್ಳುಗಾಡಿ, ಗೂಡಂಗಡಿ, ಸೇರಿದಂತೆ ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟುಕೊಂಡು ಯಾರಿಗೂ ತೊಂದರೆಯಾಗದಂತೆ ರಸ್ತೆ ಬದಿಯಲ್ಲಿ ಅಂಗಡಿ ತೆರೆದು ತಮ್ಮ ಕುಟುಂಬವನ್ನು ಸಾಕುತ್ತಿರುವಾಗ ಹಲವಾರು ಕಾನೂನುಗಳ ನೆಪ ಹೇಳಿಕೊಂಡು ಅಂಗಡಿಗಳನ್ನು ಧ್ವಂಸ ಮಾಡುವ ನೀಚ ಕೃತ್ಯವೂ ಅಮಾನುಷವಾಗಿದೆ ಎಂದು ಹೇಳಿದ್ದಾರೆ.
ಬಡ ಕುಟುಂಬದ ಕಣ್ಣೀರಿನ ಶಾಪದ ಫಲ ಧ್ವಂಸಗೊಳಿಸಿದವರಿಗೆ ಮತ್ತು ಅದಕ್ಕೆ ಪ್ರೇರಣೆ ನೀಡಿದವರ ಕುಟುಂಬಕ್ಕೂ ಸಿಕ್ಕದೇ ಇರದು. ಒಬ್ಬ ಬಡವನ ಅನ್ನಕ್ಕೆ ಕಲ್ಲು ಹಾಕಿ ನೀವು ಕುಟುಂಬದ ಸದಸ್ಯರೊಂದಿಗೆ ಸಂತೋಷವಾಗಿರಲು ಹೇಗೆ ಸಾಧ್ಯವಾಗುತ್ತದೆ ಬಾಬು ತಿಳಿಸಿದ್ದಾರೆ.
ಬಡವರು ಮನೆ ನಿರ್ಮಾಣ ಅಥವಾ ವ್ಯಾಪಾರ ಮಾಡಲು ಸರಕಾರದ ಆರ್ಥಿಕ ಸಹಾಯ ಧನದ ಯೋಜನೆಗೆ ಅರ್ಜಿ ಸಲ್ಲಿಸಿದರೆ ಹಣಕಾಸು ಸಹಾಯ ಮಾಡಲು ಸತಾಯಿಸುವ ಅಥವಾ ಅರ್ಜಿಗಳನ್ನು ತಿರಸ್ಕರಿಸುವ ಇವರು ಕೆಡವಲು ಮುತುವರ್ಜಿ ವಹಿಸುವುದು ಖೇದಕರವಾಗಿದೆ.
ಒಂದು ವೇಳೆ ಕಾನೂನಿನ ಪ್ರಕಾರ ಅದನ್ನು ತೆಗೆಯಲೇ ಬೇಕೆಂದರೆ ಕಾನೂನಿನ ಪ್ರಕಾರವೆ ಪರ್ಯಾಯ ವ್ಯವಸ್ಥೆ ಮಾಡಿ ನಂತರ ಅಲ್ಲಿಂದ ಖಾಲಿ ಮಾಡಿಸಬಹುದಿತ್ತು. ಆದರೆ ಇದ್ಯಾವುದನ್ನು ಮಾಡದೆ ಏಕಾಏಕಿ ಬಂದು ಬಡ ವ್ಯಾಪಾರಿಯ ಗೂಡಂಗಡಿಯನ್ನು ಧ್ವಂಸಗೊಳಿಸಿದ ಗ್ರಾ.ಪಂ ನಡೆಯನ್ನು ಒಪ್ಪಲು ಸಾಧ್ಯವಿಲ್ಲ. ಗ್ರಾ.ಪಂ ಆಡಳಿತಕ್ಕೆ ತಾಕತ್ತಿದ್ದರೆ ಈ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಅನಧಿಕೃತ ಕಟ್ಟಡಗಳ ಪಟ್ಟಿಯನ್ನು ಬಹಿರಂಗಪಡಿಸಿ ಎಲ್ಲಾ ಅನಧಿಕೃತ ಕಟ್ಟಡಗಳನ್ನು ಧ್ವಂಸಗೊಳಿಸಿ ತಮ್ಮ ತಾಕತ್ತು ಪ್ರದರ್ಶಿಸಲಿ ಎಂದು ಸವಾಲು ಹಾಕಿದ್ದಾರೆ.
ಗೂಡಂಗಡಿಯ ಬಡ ವ್ಯಾಪಾರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಇಲ್ಲದಿದ್ದಲ್ಲಿ ದಲಿತ ಮತ್ತು ಸಾರ್ವಜನಿಕರೊಂದಿಗೆ ಸೇರಿ ಹೋರಾಟ ನಡೆಸಲಾಗುವುದೆಂದು ಬಾಬು ಸವಣೂರು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.