ಸೂರಿಕುಮೇರು: ದ್ವಿಚಕ್ರ ವಾಹನ ಸ್ಕಿಡ್ ಆಗಿ ಜವುಳಿ ವ್ಯಾಪಾರಸ್ಥ ಅಬ್ದುಲ್ ಖಾದರ್ ಮೃತ್ಯು
ಬಂಟ್ವಾಳ: ಸೂರಿಕುಮೇರಿನಲ್ಲಿ ಅ.28ರಂದು ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪಾಣೆಮಂಗಳೂರು ಸಮೀಪದ ನರಿಕೊಂಬು ಗ್ರಾಮದ ಉಪ್ಪುಗುಡ್ಡೆ ನಿವಾಸಿ, ಜವುಳಿ ವ್ಯಾಪಾರಸ್ಥ ಅಬ್ದುಲ್ ಖಾದರ್ ಅವರು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪುತ್ತೂರಿನಿಂದ ದ್ವಿಚಕ್ರ ವಾಹನದಲ್ಲಿ ವಾಪಸ್ಸು ಬರುತ್ತಿದ್ದ ವೇಳೆ ಸೂರಿಕುಮೇರಿನಲ್ಲಿ ಸ್ಕೂಟರ್ ಸ್ಕಿಡ್ ಆಗಿ ಈ ಅವಘಡ ಸಂಭವಿಸಿದ್ದು, ಸಹಸವಾರರಾಗಿ ಪ್ರಯಾಣಿಸುತ್ತಿದ್ದ ಅಬ್ದುಲ್ ಖಾದರ್ ಅವರು ರಸ್ತೆಗೆಸೆಯಲ್ಟಟ್ಟು ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಅವರು ರಾತ್ರಿ ವೇಳೆಗೆ ಕೊನೆಯುಸಿರೆಳೆದರು.
ಮರಣೋತ್ತರ ಪರೀಕ್ಷೆ ಬಳಿಕ ಮಧ್ಯಾಹ್ನದ ವೇಳೆಗೆ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಅ.29ರಂದು ಸಂಜೆ ಆಲಡ್ಕ ಬದ್ರಿಯಾ ಜುಮಾ ಮಸೀದಿಯಲ್ಲಿ ದಫನ ಕಾರ್ಯ ನೆರವೇರಿಸಲಾಗಿದೆ. ಅಪಘಾತದಲ್ಲಿ ಸ್ಕೂಟರ್ ಸವಾರನಿಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.