ಪುತ್ತೂರು: ಬಾಲಕನ ಮೇಲೆ ಹಲ್ಲೆ, 9 ಮಂದಿಯ ವಿರುದ್ಧ ಪ್ರಕರಣ ದಾಖಲು
ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಮಹಿಳೆಯರು ಸೇರಿದಂತೆ ಒಟ್ಟು 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣದ ಸಂತ್ರಸ್ತ ಬಾಲಕನು 2026ರ ಅಕ್ಟೋಬರ್ 5ರಂದು ರಾತ್ರಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ, ಆತನ ಪರಿಚಯದ ಸುಧಾಕರ, ಪೇರಿಗೇರಿ ಚಂದ್ರ ಹಾಗೂ ಹರೀಶ್ ಎಂಬವರು ರಸ್ತೆ ಬದಿಯಲ್ಲಿ ನಿಂತು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎನ್ನಲಾಗಿದೆ.

ಬಳಿಕ ಸುಧಾಕರ, ಹರೀಶ್, ಪೇರಿಗೇರಿ ಚಂದ್ರ, ವಸಂತಿ, ಮೋಹನ್, ಗೋವಚಂದ್ರ, ಟಿ.ಸಿ. ಚಂದ್ರ, ಪ್ರಮೀಳ ಹಾಗೂ ಸುಮ ಎಂಬವರು ಬಾಲಕನ ಮನೆಯ ಅಂಗಳಕ್ಕೆ ಬಂದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವೇಳೆ ಜಗಳ ಬಿಡಿಸಲು ಬಂದ ಬಾಲಕನ ತಾಯಿ ಹಾಗೂ ತಂಗಿಯನ್ನೂ ದೂಡಿ ಹಾಕಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಬಾಲಕನು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.
ಈ ಕುರಿತು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನವೆಂಬರ್ 11ರಂದು ಅಪರಾಧ ಕ್ರಮಾಂಕ 140/2026ರಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳು ಹಾಗೂ ಬಾಲನ್ಯಾಯ ಕಾಯ್ದೆಯ ಕಲಂ 75ರಡಿ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




