ಜನಪರ ಹೋರಾಟಗಾರ, ಕಡಬದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿರುವ ಮೀರಾ ಸಾಹೇಬ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಕಡಬ: ಕಳೆದ ಐದು ದಶಕಗಳಿಂದ ಸಮಾಜಸೇವೆ, ರಾಜಕೀಯ ಹಾಗೂ ಸಾರ್ವಜನಿಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕಡಬದ ಹಿರಿಯ ಸಮಾಜ ಸೇವಕ ಸಯ್ಯದ್ ಮೀರಾ ಸಾಹೇಬ್ ಅವರಿಗೆ 2026ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಡಬದ ಸರ್ವತೋಮುಖ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿರುವ ಮೀರಾ ಸಾಹೇಬ್ ಅವರು ಸಾರಿಗೆ, ವಿದ್ಯುತ್, ಆರೋಗ್ಯ, ಕೃಷಿ ಹಾಗೂ ರಸ್ತೆ ಸೇರಿದಂತೆ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ್ದಾರೆ.
ಕಡಬ ತಾಲೂಕು ರಚನೆಯಾಗಬೇಕು ಎಂಬ ಬಹುಕಾಲದ ಜನರ ಬೇಡಿಕೆಗೆ ಧ್ವನಿಯಾಗಿ ತಾಲೂಕು ರಚನಾ ಹೋರಾಟ ಸಮಿತಿಯಲ್ಲಿ ಮುಂಚೂಣಿಯಲ್ಲಿದ್ದು, ಕಡಬ ತಾಲೂಕು ರಚನೆಯ ಕನಸು ನನಸಾಗಲು ಶ್ರಮಿಸಿದ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ. ತಾಲೂಕು ರಚನೆಯಾದ ಬಳಿಕ ಸರ್ಕಾರಿ ಕಚೇರಿಗಳು ಕಡಬದಲ್ಲಿಯೇ ಆರಂಭವಾಗಿ ಜನರಿಗೆ ಸ್ಥಳೀಯವಾಗಿ ಆಡಳಿತಾತ್ಮಕ ಸೌಲಭ್ಯಗಳು ದೊರೆಯಬೇಕು ಎಂಬ ನಿಟ್ಟಿನಲ್ಲಿಯೂ ಧ್ವನಿ ಎತ್ತಿ ಹೋರಾಟ ನಡೆಸಿದ್ದರು.
ಕಸ್ತೂರಿರಂಗನ್ ವರದಿಯಿಂದ ರೈತರು ಹಾಗೂ ಗ್ರಾಮೀಣ ಜನಜೀವನದ ಮೇಲೆ ಉಂಟಾಗಬಹುದಾದ ಪರಿಣಾಮಗಳ ವಿರುದ್ಧ ನಡೆದ ಜನಾಂದೋಲನದಲ್ಲಿಯೂ ಅವರು ಸಕ್ರಿಯವಾಗಿ ಭಾಗವಹಿಸಿದ್ದರು. ಕೃಷಿಭೂಮಿ, ರೈತರ ಬದುಕು ಹಾಗೂ ಗ್ರಾಮೀಣ ಜನರ ಹಕ್ಕುಗಳ ರಕ್ಷಣೆಗಾಗಿ ರೈತರೊಂದಿಗೆ ಕೈಜೋಡಿಸಿ ಹೋರಾಟ ನಡೆಸಿದ್ದರು.
ಕಡಬದ ಸ್ಥಳೀಯ ಆಡಳಿತ ವ್ಯವಸ್ಥೆಯ ಇತಿಹಾಸದಲ್ಲಿಯೂ ಸಯ್ಯದ್ ಮೀರಾ ಸಾಹೇಬ್ ಅವರ ಹೆಸರು ವಿಶೇಷವಾಗಿ ಗುರುತಿಸಿಕೊಂಡಿದೆ. ಕಡಬದ ಮೊದಲ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಅವರ ಸೇವೆ ಹಾಗೂ ಜನರೊಂದಿಗಿನ ಆತ್ಮೀಯ ಸಂಬಂಧಕ್ಕೆ ಸಾಕ್ಷಿಯಾಗಿ ಇಂದಿಗೂ ಕಡಬದ ಹಿರಿಯರು ಅವರನ್ನು ‘ಚೇರ್ಮನ್ ಸಾಹೇಬ್ರು’ ಎಂದೇ ಕರೆಯುತ್ತಾರೆ.
ಜಿಲ್ಲಾ ಪಂಚಾಯತ್ ಸದಸ್ಯರಾಗಿ ಹಾಗೂ ಜಿಲ್ಲಾ ಪಂಚಾಯತ್ನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ.
2025ನೇ ಸಾಲಿನ ಗಣರಾಜ್ಯೋತ್ಸವ ಸಂದರ್ಭದಲ್ಲಿ ಕಡಬ ತಾಲೂಕು ಆಡಳಿತ ಹಾಗೂ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಸಮಾಜ ಸೇವೆಗಾಗಿ ಅವರನ್ನು ಸನ್ಮಾನಿಸಲಾಗಿತ್ತು.



