ಕುಂಬ್ರ: ರಾತ್ರಿ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ, ಹಣ ಕಳ್ಳತನ
ಪುತ್ತೂರು: ಮನೆಮಂದಿ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ ಸಂದರ್ಭದಲ್ಲಿ ಮನೆಯ ಹಿಂಬಾಗದ ಕಿಟಕಿಯ ಸರಳುಗಳನ್ನು ಮುರಿದು ಒಳ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ಹಣ ದೋಚಿದ ಘಟನೆ ನ.1ರಂದು ರಾತ್ರಿ ಕುಂಬ್ರ ಸಮೀಪದ ಕುಯ್ಯಾರು ಎಂಬಲ್ಲಿ ವರದಿಯಾಗಿದೆ.

ಕುಂಬ್ರದಲ್ಲಿ ಸಿ.ಎಂ ಚಿಕನ್ ಸೆಂಟರ್ ಹೊಂದಿರುವ ಕುಯ್ಯಾರು ನಿವಾಸಿ ಬಶೀರ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು ಬಶೀರ್ ಅವರು ನ.1ರಂದು ರಾತ್ರಿ 9.15 ರ ವೇಳೆಗೆ ಪತ್ನಿ ಹಾಗೂ ಮಕ್ಕಳೊಂದಿಗೆ ಸಾರೆಪುಣಿಯಲ್ಲಿ ನಡೆದ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿದ ಬಳಿಕ 10.45 ರ ವೇಳೆಗೆ ಅವರು ಮನೆಗೆ ವಾಪಸ್ ಬಂದು ಮನೆಯೊಳಗೆ ಹೋದಾಗ ಮನೆಯ ಹಿಂದಿನ ಬಾಗಿಲು ತೆರೆದಿರುವುದು ಕಂಡು ಬಂದಿದ್ದು ಅಲ್ಲೇ ಇದ್ದ ಕಿಟಕಿಯ ಸರಳುಗಳನ್ನು ಮುರಿದಿರುವುದು ಗಮನಕ್ಕೆ ಬಂದಿದೆ. ಬಳಿಕ ಅವರು ಮನೆಯ ಕೋಣೆಯನ್ನು ಪರಿಶೀಲಿಸಿದಾಗ ಕೋಣೆಯಲ್ಲಿರುವ ಕಪಾಟು ತೆರೆದಿದ್ದು ಅದರೊಳಗಿದ್ದ ಬಟ್ಟೆ ಬರೆಗಳು ಚೆಲ್ಲಾಲ್ಲಿಯಾಗಿ ನೆಲದ ಮೇಲೆ ಬಿದ್ದಿತ್ತು. ಮಾತ್ರವಲ್ಲದೇ ಅದೇ ಕಪಾಟಿನಲ್ಲಿದ್ದ ೫ ಪವನ್ ಚಿನ್ನಾಭರಣ, ೦.೬೫೦ ಗ್ರಾಂನ ಡೈಮಂಡ್ ರಿಂಗ್ ಹಾಗೂ ೨೫ ಸಾವಿರ ರೂ ನಗದು ಕಳ್ಳತನಗೊಂಡಿದೆ ಎಂದು ಬಶೀರ್ ಅವರು ತಿಳಿಸಿದ್ದಾರೆ.
ಕಳ್ಳರು ಮನೆಯ ಇನ್ನೊಂದು ಕೋಣೆಗೆ ಹೋಗಿ ಕಪಾಟನ್ನು ಜಾಲಾಡಿದ್ದರೂ ಅದರಲ್ಲಿ ಯಾವುದೇ ವಸ್ತುಗಳು ಕಳ್ಳತನಗೊಂಡಿಲ್ಲ. ಘಟನೆ ಬಗ್ಗೆ ಬಶೀರ್ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಚಲನ ವಲನಗಳ ಬಗ್ಗೆ ತಿಳಿದಿರುವ ಕಳ್ಳರು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎನ್ನುವ ಸಂಶಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಬಶೀರ್ ಅವರ ಮನೆಯಲ್ಲಿ ನಡೆದಿರುವ ಕಳ್ಳತನ ಪ್ರಕರಣದ ಕುರಿತು ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ ಕಳ್ಳತನ ನಡೆಸಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಬೇಕೆಂದು ಸಾರೆಪುಣಿ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಶ್ರಫ್ ಸಾರೆಪುಣಿ ಆಗ್ರಹಿಸಿದ್ದಾರೆ. ಕುಂಬ್ರ ವರ್ತಕರ ಸಂಘದ ಪದಾಧಿಕಾರಿಗಳು ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ ನೇತೃತ್ವದಲ್ಲಿ ಭೇಟಿ ನೀಡಿದ್ದಾರೆ.



