ಕರಾವಳಿ

ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪತ್ರಕರ್ತ ಸಿಶೇ ಕಜೆಮಾರ್ ಆಯ್ಕೆ

ಪುತ್ತೂರು: ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪತ್ರಕರ್ತ ಸಿಶೇ ಕಜೆಮಾರ್ ಆಯ್ಕೆಯಾಗಿದ್ದಾರೆ.
ಪತ್ರಿಕೋದ್ಯಮ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ಕಳೆದ ಎರಡೂವರೆ ದಶಕಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕಜೆ ನಿವಾಸಿ, ಪ್ರಸ್ತುತ ತಿಂಗಳಾಡಿ ಸಮೀಪದ ಕಜೆಮಾರಿನಲ್ಲಿ ವಾಸವಾಗಿರುವ ಸಿ.ಶೇಷಪ್ಪ ಕಜೆಮಾರ್ (ಸಿಶೇ ಕಜೆಮಾರ್) ಅವರು ಕಳೆದ 25 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ.

ಕಜೆಮಾರ್ ವೃತ್ತಿ ಪಯಣ: ಆರಂಭದಲ್ಲಿ ‘ಕರಾವಳಿ ಮಾರುತ’ ಸಂಜೆ ಪತ್ರಿಕೆ ಹಾಗೂ ‘ಯುವಶಕ್ತಿ ಕ್ರಾಂತಿ’ ವಾರಪತ್ರಿಕೆಯಲ್ಲಿ ವರದಿಗಾರ ಮತ್ತು ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ 22 ವರ್ಷಗಳಿಂದ ‘ಸುದ್ದಿ ಬಿಡುಗಡೆ’ ಕನ್ನಡ ದೈನಿಕದಲ್ಲಿ ನಿರಂತರವಾಗಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇವಸ್ಥಾನಗಳ ಬ್ರಹ್ಮಕಲಶೋತ್ಸವ, ಗರಡಿಗಳ ಚರಿತ್ರೆ, ದೀಪಾವಳಿ ಹಾಗೂ ಕಂಬಳ ವಿಶೇಷಾಂಕಗಳಿಗೆ ಅಧ್ಯಯನಾತ್ಮಕ ಲೇಖನಗಳನ್ನು ಬರೆದಿದ್ದಾರೆ. ಅನೇಕ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದಾರೆ.



ಸಾಹಿತ್ಯ ಕ್ಷೇತ್ರದಲ್ಲಿ ಸೇವೆ: ‘ಸಿಶೇ ಕಜೆಮಾರ್’ ಎಂಬ ಕಾವ್ಯನಾಮದೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಇವರು ಮಂಗಳೂರು ಮತ್ತು ಮಡಿಕೇರಿ ಆಕಾಶವಾಣಿಗಳಲ್ಲಿ ತುಳು-ಕನ್ನಡ ಕಥೆ, ಕವನ ವಾಚನ ಹಾಗೂ ಯುವವಾಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಕನ್ನಡ ಹಾಗೂ ತುಳು ಸಾಹಿತ್ಯ ಸಮ್ಮೇಳನಗಳು, ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವ ಸೇರಿದಂತೆ ನೂರಾರು ಕವಿಗೋಷ್ಠಿಗಳಲ್ಲಿ ಕವನ ಹಾಗೂ ಚುಟುಕುಗಳನ್ನು ವಾಚಿಸಿದ್ದಾರೆ. ಕಜೆಮಾರ್ ಅವರು ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವೊಂದರಲ್ಲಿ ವಾಚಿಸಿದ ‘ನನಗೂ ಒಂದು ಪ್ರಶಸ್ತಿ ಕೊಡುವಿರಾ’ ಕವನ ವ್ಯಾಪಕ ವೈರಲ್ ಆಗಿತ್ತಲ್ಲದೇ ಲಕ್ಷಾಂತರ ಮಂದಿ ಅದನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ರಂಗಭೂಮಿಯಲ್ಲೂ ಸೈ: ರಂಗಭೂಮಿ ಕ್ಷೇತ್ರದಲ್ಲಿಯೂ ಆಸಕ್ತಿ ಹೊಂದಿರುವ ಇವರು ‘ಬಯ್ಯಮಲ್ಲಿಗೆ’, ‘ಭಾಗ್ಯಲಕ್ಷ್ಮಿ’ ಸೇರಿದಂತೆ ಹಲವು ತುಳು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಶಿವಧ್ವಜ್ ನಿರ್ದೇಶನದ ‘ಗೊತ್ತಾನಗ ಪೊರ್ತಾಂಡ್’, ‘ಬಲೆ ತೆಲಿಪುಗ’ ಮೊದಲಾದ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.


ಬಡವರಿಗೆ ನೆರವು: ಸಾಮಾಜಿಕ ಕಳಕಳಿಯ ಬರವಣಿಗೆಯ ಮೂಲಕ ಬಡವರು, ನಿರ್ಗತಿಕರು ಹಾಗೂ ಸಂಕಷ್ಟದಲ್ಲಿರುವವರ ಧ್ವನಿಯಾಗಿ ಗುರುತಿಸಿಕೊಂಡಿದ್ದಾರೆ. ಚಿಕಿತ್ಸೆಗೆ ನೆರವು ಕೋರುವ ಲೇಖನಗಳು, ಸಾಧಕರ ಪರಿಚಯ, ಸಾಮಾಜಿಕ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವ ಬರಹಗಳು ಹಾಗೂ ಚಲನಚಿತ್ರ ನಟ-ನಟಿಯರ ಸಂದರ್ಶನಗಳನ್ನು ಪ್ರಕಟಿಸಿದ್ದಾರೆ.


ವಿವಿಧ ಜವಾಬ್ದಾರಿ ನಿರ್ವಹಣೆ: ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಹೋಬಳಿ ಘಟಕದ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ಘಟಕದ ಪ್ರಧಾನ ಕಾರ್ಯದರ್ಶಿ, ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರು, ಜಾನಪದ ಸಾಹಿತ್ಯ ವೇದಿಕೆಯ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಸುದ್ದಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪುತ್ತೂರಿನ ನಿರ್ದೇಶಕರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ತಿಂಗಳಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕೆಯ್ಯೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಕುಂಬ್ರ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ.
ಪತ್ರಿಕೋದ್ಯಮದ ಜೊತೆಗೆ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಬಹುಮುಖ ಕೊಡುಗೆಯನ್ನು ಗುರುತಿಸಿ ಸಿ. ಶೇಷಪ್ಪ ಕಜೆಮಾರ್ ಅವರನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!