ಪುತ್ತೂರಿನಲ್ಲಿ ನಿಷೇಧಿತ ಲಾಟರಿ ಮಾರಾಟ: ಎರಡು ಪ್ರತ್ಯೇಕ ಪ್ರಕರಣ ದಾಖಲು
ಪುತ್ತೂರು: ನಿಷೇಧಿತ ಲಾಟರಿ ಟಿಕೆಟ್ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.

ಅಕ್ಟೋಬರ್ 14ರಂದು ಸಂಜೆ ಪುತ್ತೂರು ಕಸಬ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಕೇರಳ ರಾಜ್ಯದ ಲಾಟರಿ ಟಿಕೆಟ್ಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪುತ್ತೂರು ನಗರ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ವಾಸು ನಾಯ್ಕ್ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಈ ವೇಳೆ ಅಂಗಡಿ ಮಾಲೀಕ, ಪುತ್ತೂರು ಕಸಬ ನಿವಾಸಿ ಶ್ರೀನಿವಾಸ ಪೈ (33) ಎಂಬವರ ಬಳಿ ಲಾಟರಿ ಟಿಕೆಟ್ಗಳು ಪತ್ತೆಯಾಗಿವೆ. ಕೇರಳ ರಾಜ್ಯದ ಲಾಟರಿ ಟಿಕೆಟ್ಗಳನ್ನು ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಟಿಕೆಟ್ಗಳನ್ನು ವಶಪಡಿಸಿಕೊಂಡ ಪೊಲೀಸರು ಅ.ಕ್ರ. 124/2026ರ ಅಡಿಯಲ್ಲಿ ಲಾಟರಿ ನಿಷೇಧ ಕಾಯ್ದೆ 1998ರ ಕಲಂ 7(iii)ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದೇ ರೀತಿ ಪುತ್ತೂರು ಕಸಬ ಗ್ರಾಮದ ಲಿನೆಟ್ ಜಂಕ್ಷನ್ ಬಳಿಯ ಪಾನ್ ಸ್ಟಾಲ್ನಲ್ಲಿ ನಿಷೇಧಿತ ಲಾಟರಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕ ಗಂಗಾಧರ ಎ.ಬಿ. ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಈ ವೇಳೆ ಅಂಗಡಿ ಮಾಲೀಕ, ಪುತ್ತೂರು ಪಡ್ನೂರು ಗ್ರಾಮದ ನಿವಾಸಿ ಲಕ್ಷ್ಮಣ (42) ಎಂಬವರಿಂದ ಮಾರಾಟಕ್ಕಾಗಿ ಇರಿಸಲಾಗಿದ್ದ ಲಾಟರಿ ಟಿಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೇರಳದಿಂದ ಲಾಟರಿ ಟಿಕೆಟ್ಗಳನ್ನು ತಂದು ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 125/2026ರ ಅಡಿಯಲ್ಲಿ ಲಾಟರಿ ನಿಷೇಧ ಕಾಯ್ದೆ 1998ರ ಕಲಂ 7(iii)ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

