ಕೋವಿ ನವೀಕರಣ; ಪರವಾನಿಗೆ ನೀಡುವಂತೆ ಗೃಹ ಸಚಿವ ಖರ್ಗೆಗೆ
ಶಾಸಕ ಅಶೋಕ್ ರೈ ಮನವಿ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಲೈಸನ್ನಿಂಗ್ ಪ್ರಾಧಿಕಾರ ಚಾಲ್ತಿಯಲ್ಲಿರುವ ಆಯುಧ(ಕೋವಿ, ರಿವಾಲ್ವರ್ ಇತ್ಯಾದಿ) ಪರವಾನಿಗೆಗಳ ನವೀಕರಣ ಅರ್ಜಿಗಳಿಗೆ ಪರವಾನಿಗೆ ನೀಡುವ ಕುರಿತು ಶೀಘ್ರ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಗೃಹ ಸಚಿವ ಪ್ರಿಯಾಂಕ ಖರ್ಗೆಅವರಿಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ.

ಶುಕ್ರವಾರ ಗೃಹಸಚಿವರನ್ನು ಭೇಟಿಯಾಗಿ ಕೋವಿ ಪರವಾನಿಗೆ ವಿಚಾರದಲ್ಲಿ ಮಾತುಕತೆ ನಡೆಸಿದ ಶಾಸಕರು “ಹಲವರು ಕೃಷಿ ಮತ್ತು ಆತ್ಮ ರಕ್ಷಣೆಗಾಗಿ ಆಡಳಿತದಿಂದ ಸೂಕ್ತ ಪರವಾನಿಗೆ ಪಡೆದು ಆಯುಧಗಳನ್ನು ಹಲವಾರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (ಕೋವಿ, ರಿವಾಲ್ವರ್ ಇತ್ಯಾದಿ) ಹೊಂದಿರುತ್ತಾರೆ. ಇದು ಕಾಲ ಕಾಲಕ್ಕೆ ಕ್ರಿಮಿನಲ್ ಕೇಸ್ ರಹಿತರಿಗೆ ಸುಗಮವಾಗಿ ನವೀಕರಣಗೊಳ್ಳುತ್ತಿತ್ತು ಅಲ್ಲದೆ ಪರವಾನಿಗೆದಾರರಿಗೆ ವಯಸ್ಸಾದಲ್ಲಿ ಅಥವಾ ಮೃತಪಟ್ಟಲ್ಲಿ ಅವರ ವಾರೀಸುದಾರ ಅರ್ಜಿ ಸಲ್ಲಿಸಿದಲ್ಲಿ ವರ್ಗಾವಣೆಯಾಗುತ್ತಿತ್ತು.
ಇನ್ನು ಕೆಲವರು ಹೊಸ ಪರವಾನಿಗೆಗೆ ಅರ್ಜಿ ಸಲ್ಲಿಸಿ ಮಂಜೂರಾಗಿ ಆಯುಧಗಳನ್ನು ಹೊಂದುತ್ತಿದ್ದರು. ಇಂತಹ ಸುಗಮವಾದ ವ್ಯವಸ್ಥೆ 2025ರ ಮೇ ತಿಂಗಳುಗಳವರೆಗೆ ರೂಢಿಯಿಂದ ನಡೆದು ಬರುತ್ತಿತ್ತು. ಜೂನ್ 2025ರಿಂದ ಈ ಕುರಿತು ಯಾವುದೇ ಕಾನೂನು/ನಿಯಮ ಬದಲಾಗದಿದ್ದರೂ ಲೈಸನ್ಸಿಂಗ್ ವ್ಯವಸ್ಥೆ ಎಲ್ಲ ಅರ್ಜಿಗಳನ್ನು ತಿರಸ್ಕರಿಸಿ ಪರವಾನಿಗೆದಾರರನ್ನು ದಮನಿಸುತ್ತಿದ್ದು ಹೀಗೆ ಮುಂದುವರಿದಲ್ಲಿ ತೊಂದರೆಯಾಗುವ ಬಗ್ಗೆ ಕೃಷಿಕರು ಮನವಿಗಳನ್ನು ಮಾಡುತ್ತಿದ್ದಾರೆ. ಆದ್ದರಿಂದ ಸದರಿ ನವಿಕರಣದ ಬಗ್ಗೆ ಪರವಾನಿಗೆ ನೀಡುವ ಕುರಿತು ಇಲಾಖೆಗೆ ಆದೇಶಿಸುವಂತೆ ಸಚಿವರಿಗೆ ಶಾಸಕರು ಮನವಿ ಮಾಡಿದ್ದಾರೆ. ಮನವಿಗೆ ಸಚಿವರಿಂದ ಸೂಕ್ತ ಸ್ಪಂದನೆಯೂ ದೊರಕಿದೆ ಎಂದು ಶಾಸಕರು ತಿಳಿಸಿದ್ದಾರೆ.





