ಶಾಲಾ-ಕಾಲೇಜುಗಳಲ್ಲಿ ಹಿಜಾಬ್, ಜನಿವಾರಕ್ಕೆ ಅವಕಾಶ: ರಾಜ್ಯ ಸರ್ಕಾರ ಆದೇಶ
ಬೆಂಗಳೂರು: ಹಿಜಾಬ್ ಮತ್ತು ಜನಿವಾರ ಸೇರಿದಂತೆ ಧಾರ್ಮಿಕ ಪದ್ಧತಿಗೆ ಅನುಗುಣವಾದ ವಸ್ತ್ರ ಧರಿಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸಮವಸ್ತ್ರ ವಿಚಾರವಾಗಿ 2022ರ ಆದೇಶ ಹಿಂಪಡೆದು ಹೊಸ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ಶಿಕ್ಷಣ ಕಾಯ್ದೆ, 1983ರ ಅಡಿಯಲ್ಲಿ ಹೊರಡಿಸಲಾದ ಹೊಸ ಸರ್ಕಾರಿ ಆದೇಶದಲ್ಲಿ, ಮೇ 13 ರಂದು ರಾಜ್ಯವು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಜನಿವಾರ, ಪವಿತ್ರ ದಾರ, ಶಿವದಾರ, ರುದ್ರಾಕ್ಷಿ, ಪೇಟ ಅಥವಾ ಟರ್ಬನ್, ತಲೆ ವಸ್ತ್ರ ಅಥವಾ ಹಿಜಾಬ್ ಇತರೆ ಯಾವುದೇ ಸ್ವರೂಪದ ಸಾಂಪ್ರದಾಯಿಕ ಸಂಕೇತವನ್ನು ನಿಗದಿಪಡಿಸಲಾದ ಸಮವಸ್ತ್ರ ಜೊತೆಗೆ ಧರಿಸಬಹುದು. ಸಾಂಪ್ರದಾಯಿಕ ಮತ್ತು ಪದ್ಧತಿ ಆಧಾರಿತ ಸಂಕೇತ ಸಮವಸ್ತ್ರಕ್ಕೆ ಪೂರಕವಾಗಿರಬೇಕು. ಸಮವಸ್ತ್ರ ಬದಲಿಸುವ, ಮಾರ್ಪಡಿಸುವ ಅಥವಾ ವಿಫಲಗೊಳಿಸುವಂತಿರಬಾರದು ಎಂದು ಹೇಳಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಾತನಾಡಿ ಯಾವುದೇ ವಿದ್ಯಾರ್ಥಿಯು ಅಂತಹ ಅನುಮತಿಸಲಾದ ಚಿಹ್ನೆಗಳನ್ನು ಧರಿಸಿದ್ದಕ್ಕಾಗಿ ತರಗತಿ ಕೊಠಡಿಗಳು, ಪರೀಕ್ಷಾ ಸಭಾಂಗಣಗಳು ಅಥವಾ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರವೇಶವನ್ನು ನಿರಾಕರಿಸಬಾರದು. ಯಾವುದೇ ವಿದ್ಯಾರ್ಥಿಯನ್ನು ಅಂತಹ ಚಿಹ್ನೆಗಳನ್ನು ಧರಿಸಲು ಅಥವಾ ತೆಗೆದುಹಾಕಲು ಒತ್ತಾಯಿಸಲಾಗುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದರು.
ಉಡುಪಿಯಲ್ಲಿ ಶುರುವಾದ ವಿದ್ಯಾರ್ಥಿಗಳ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ 2022ರಲ್ಲಿ ಬಿಜೆಪಿ ಸರಕಾರ ಹೊರಡಿಸಿದ್ದ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವ ಕುರಿತ ಆದೇಶವನ್ನು ಇಂದು ಸಿದ್ದರಾಮಯ್ಯ ಸರ್ಕಾರ ಹಿಂಪಡೆದಿದೆ. ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶದ ಮೂಲಕ ಹಿಜಾಬ್ ಧರಿಸಲು ಅವಕಾಶ ನಿರಾಕರಿಸಲಾಗಿತ್ತು. ಇದೀಗ ಈ ಅದೇಶವನ್ನು ವಾಪಸ್ ಪಡೆಯಲಾಗಿದೆ.




