ಕೋಮು ಪ್ರಚೋದನೆಯ ಸಂದೇಶ ಹರಡಿದ ಆರೋಪಿಯ ಬಂಧನ
ಮಂಗಳೂರು: ಕೋಮು ಪ್ರಚೋದನಕಾರಿ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದಲ್ಲಿ ಯುವಕನೋರ್ವನನ್ನು ಕಂಕನಾಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉಡುಪಿ ಕಾಪು ತಾಲೂಕಿನ ಮೂಡುಬೆಳ್ಳೆ ಗ್ರಾಮದ ಪವನ್ ಆಚಾರ್ಯ (22ವ) ಎಂದು ಗುರುತಿಸಲಾಗಿದೆ.

2025ರಲ್ಲಿ ಬಜ್ಜೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆಯ ಬಳಿಕ ಆರೋಪಿ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಸಂದೇಶಗಳನ್ನು ಹಂಚಿಕೊಂಡ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದಾಗ ಕೋಮುಪ್ರಚೋದಕ ಪೋಸ್ಟ್ ಗಳನ್ನು ಹಂಚಿಕೊಂಡ ವ್ಯಕ್ತಿ ಪವನ್ ಆಚಾರ್ಯ ಎಂದು ತಿಳಿದು ಬಂದಿದೆ. ಅದರಂತೆ ಪೊಲೀಸರು ಆರೋಪಿಯನ್ನು ಬುಧವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಯು ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಮಾಡಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ



