ಬಂಟ್ವಾಳ: ಗ್ಯಾಸ್ ಏಜೆನ್ಸಿ ಮೇಲೆ ಆಟೋ ಚಾಲಕನಿಂದ ಹಲ್ಲೆ, ದಾಂಧಲೆ
ಬಂಟ್ವಾಳ: ಇಲ್ಲಿನ ಮೆಲ್ಕಾರ್ ಬೊಗೋಡಿಯಲ್ಲಿರುವ ಗ್ಯಾಸ್ ಪಂಪ್ ಏಜೆನ್ಸಿಯೊಂದಕ್ಕೆ ಆಟೋ ರಿಕ್ಷಾದಲ್ಲಿ ಬಂದ ವ್ಯಕ್ತಿಯೊಬ್ಬ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಕಛೇರಿಯ ಸೊತ್ತುಗಳನ್ನು ಹಾನಿಗೊಳಿಸಿ ದಾಂಧಲೆ ನಡೆಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಸಜಿಪಮೂಡಾ ನಿವಾಸಿ ಅಫ್ರೀಝ್ (28) ಎಂಬಾತ ತನ್ನ ಆಟೋರಿಕ್ಷಾದಲ್ಲಿ ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಬೊಗೋಡಿಯಲ್ಲಿರುವ ಗ್ಯಾಸ್ ಏಜೆನ್ಸಿಗೆ ಬಂದಿದ್ದನು. ಈ ವೇಳೆ ಅಲ್ಲಿನ ಸಿಬ್ಬಂದಿ ಅಶ್ವಿನ್ ಎಂಬವರಿಗೆ ಅಶ್ಲೀಲ ಪದಗಳಿಂದ ಬೈದಿದ್ದಲ್ಲದೆ, ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಅಷ್ಟಕ್ಕೇ ನಿಲ್ಲದ ಆರೋಪಿ ಗ್ಯಾಸ್ ಪಂಪ್ ಏಜೆನ್ಸಿಯ ಸೊತ್ತುಗಳನ್ನು ಜಖಂಗೊಳಿಸಿದ್ದಾನೆ. ಈ ದಾಂಧಲೆಯಿಂದಾಗಿ ಸುಮಾರು 48,000 ರೂ. ಗಳಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಏಜೆನ್ಸಿಯ ಮ್ಯಾನೇಜರ್ ಕುನಲ್ ಭುಹ್ನಿಯಾ (27) ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





