ಮಂಗಳೂರು: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಕಾರು ಗುದ್ದಿ ಕೊಲೆಗೆ ಯತ್ನ, ಆರೋಪಿ ಬಂಧನ
ಮಂಗಳೂರು: ವ್ಯಕ್ತಿಯೊಬ್ಬ ತನ್ನ ಕಾರಿನಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಕೊಲೆ ಯತ್ನ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾರು ಡಿಕ್ಕಿ ಹೊಡೆದು ಗಾಯಗೊಂಡ ವ್ಯಕ್ತಿಯನ್ನು ಮಲ್ಲಿಕಟ್ಟೆ ನಿವಾಸಿ ಮೋಹನ್ ದಾಸ್ ಶೆಟ್ಟಿ (56) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಮಹಮ್ಮದ್ ಶರೀಫ್ ಎಂದು ಗುರುತಿಸಲಾಗಿದ್ದು, ಇವರಿಬ್ಬರ ನಡುವೆ ಭೂ ವ್ಯವಹಾರಕ್ಕೆ ಸಂಬಂಧಿಸಿದ ವಿವಾದ ಇತ್ತು. ಸುರತ್ಕಲ್ ಹಾಗೂ ವಾಮಂಜೂರು ಪ್ರದೇಶಗಳಲ್ಲಿ ಸುಮಾರು 2 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದ ವಿಚಾರದಲ್ಲಿ ಉಂಟಾದ ಅಸಮಾಧಾನವೇ ಘಟನೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಮಂಗಳವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ನಗರದ ಆರ್ಯ ಸಮಾಜ ರಸ್ತೆಯ ಬಳಿ ಇಬ್ಬರ ನಡುವೆ ಮಾತುಕತೆ ನಡೆದಿದೆ. ಈ ವೇಳೆ ಆರೋಪಿಯು ಮೋಹನ್ ದಾಸ್ ಅವರ ಮೊಬೈಲ್‌ನ್ನು ಕಸಿದುಕೊಂಡಿದ್ದಾನೆ. ಬಳಿಕ ಮೋಹನ್ ದಾಸ್ ಶೆಟ್ಟಿ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಆರೋಪಿಯು ತನ್ನ ಇನೋವಾ ಕ್ರಿಸ್ಟಾ ಕಾರನ್ನು ಅತಿವೇಗದಲ್ಲಿ ಚಲಾಯಿಸಿ, ಹಿಂಬದಿಯಿಂದ ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.





