ಪುತ್ತೂರು: ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಆರೋಪಿಯ ಬಂಧನ
ಪುತ್ತೂರು: ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಡಿ.3ರಂದು ಪುತ್ತೂರು ತಾಲೂಕಿನ ಕಬಕ ಗ್ರಾಮದ ಮುರ ಎಂಬಲ್ಲಿರುವ ರೈಲ್ವೇ ಬ್ರಿಡ್ಜ್ ಬಳಿ, ವ್ಯಕ್ತಿಯೋರ್ವ ಮಾದಕವಸ್ತುವನ್ನಿಟ್ಟುಕೊಂಡು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ, ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್ ಐ ಆಂಜನೇಯ ರೆಡ್ಡಿಯವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಆರೋಪಿಯನ್ನು ಹಿಡಿದು ವಿಚಾರಿಸಿದ್ದು ಆತನು ಪುತ್ತೂರು ಕಬಕ ನಿವಾಸಿ ಉಮ್ಮರ್ ಫಾರೂಕ್ (41.ವ) ಎಂದು ತಿಳಿದು ಬಂದಿದೆ.
ಆತನನ್ನು ಹಾಗೂ ಆತನ ಬಳಿಯಿದ್ದ ದ್ವಿಚಕ್ರ ವಾಹನ ತಪಾಸಣೆ ನಡೆಸಲಾಗಿ, ಆರೋಪಿಯು ಮಾರಾಟ ಮಾಡಲು ಅಕ್ರಮವಾಗಿ ಇಟ್ಟುಕೊಂಡಿದ್ದ 10 ಗ್ರಾಂ MDMA ಎಂಬ ನಿಷೇಧಿತ ಮಾದಕವಸ್ತು ಪತ್ತೆಯಾಗಿದೆ. ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ವಶಕ್ಕೆ ಪಡೆದು, ಆತನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ: 119/2025, ಕಲಂ: 8(C),22(b) NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯ ಪ್ರಾಥಮಿಕ ವಿಚಾರಣೆ ವೇಳೆ, ಈತನ ವಿರುದ್ಧ ಜಿಲ್ಲಾ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ 6 ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ.





